ನಾಗರಿಕ ಹೋರಾಟ ಸಮಿತಿ ಮುಖಂಡರಿಗೆ ರೌಡಿ ಶೀಟರ್ ಪಟ್ಟ: ಮುನೀರ್ ಕಾಟಿಪಳ್ಳ
ಮಂಗಳೂರು, ಸೆ. 15: ಎಂಆರ್‌ಪಿಎಲ್ ಮೂರನೆ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಸುತ್ತಮುತ್ತ ಉಂಟಾದ ಮಾಲಿನ್ಯದ ವಿರುದ್ಧ ಹೋರಾಡಿದ ನಾಗರಿಕ ಹೋರಾಟ ಸಮಿತಿಯ ಮುಖಂಡರಿಗೆ ರೌಡಿ ಶೀಟರ್ ಪಟ್ಟ ಕಟ್ಟಿದ ಪೊಲೀಸರ ಧೋರಣೆಯನ್ನು ಖಂಡಿಸಿ ಸೆಪ್ಟಂಬರ್ 19ರಂದು ಬೆಳಗ್ಗೆ 10:30ಕ್ಕೆ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಡಿವೈಎಫ್‌ಐ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಾಗರಿಕ ಹೋರಾಟ ಸಮಿತಿಯ ಪ್ರಮುಖರನ್ನು ರೌಡಿಶೀಟರ್ ಪಟ್ಟ ಕಟ್ಟಿ ಕ್ರಿಮಿನಲ್‌ಗಳಾಗಿ ಚಿತ್ರಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಸುರತ್ಕಲ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಚೆಲುವರಾಜು ಮಾಡಿದ್ದಾರೆ ಎಂದು ಆರೋಪಿಸಿದರು. ಚೆಲುವರಾಜು ಅವರ ಈ ಧೋರಣೆಯ ವಿರುದ್ಧ ಅಂದು ಸುರತ್ಕಲ್ ರೈಲ್ವೆ ಸೇತುವೆ ಬಳಿಯಿಂದ ಸುರತ್ಕಲ್ ಠಾಣೆಯವರೆಗೆ ಕಪ್ಪು ಬಾವುಟ ಹಿಡಿದು ಮೆರವಣಿಗೆ ನಡೆಸಿ ಬಳಿಕ ಠಾಣೆಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ಮುನೀರ್ ತಿಳಿಸಿದರು.
ಸುಮಾರು ಒಂದೂವರೆ ವರ್ಷಗಳ ಕಾಲ ನಡೆದ ಶಾಂತಿಯುತ ಹೋರಾಟದಿಂದಾಗಿ ರಾಜ್ಯ ಸರಕಾರ ಸಮಸ್ಯೆ ಪರಿಹಾರಕ್ಕೆ ಕ್ರಮಗಳನ್ನು ಸೂಚಿಸಿ ಆದೇಶ ಹೊರಡಿಸಿತ್ತು. ಈ ಮೂಲಕ ಸಮಿತಿಯ ಹೋರಾಟಕ್ಕೆ ಗೆಲುವು ಸಿಕ್ಕಿತ್ತು. ಅಂದಿನ ಹೋರಾಟದ ಸಂದರ್ಭದಲ್ಲಿ ರಸ್ತೆ ತಡೆ, ಅನುಮತಿ ರಹಿತ ಪ್ರತಿಭಟನೆಗಳ ನೆಪಗಳನ್ನು ಮುಂದಿಟ್ಟು ಕೆಲವು ಪ್ರಕರಣಗಳು ಸುರತ್ಕಲ್ ಮತ್ತು ಪಣಂಬೂರು ಠಾಣೆಗಳಲ್ಲಿ ದಾಖಲಾಗಿದ್ದವು. ಅನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯು ಹೋರಾಟದ ಸಂದರ್ಭದಲ್ಲಿ ಹೂಡಲಾಗಿದ್ದ ಪ್ರಕರಣಗಳನ್ನು ಕೈಬಿಡುವಂತೆ ಸೆಝ್, ಎಂಆರ್‌ಪಿಎಲ್ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಅದರಂತೆ ಸೆಝ್ ಕಂಪೆನಿಯು ತಾನು ದಾಖಿಲಿಸಿದ್ದ ಮೊಕದ್ದಮೆಗಳನ್ನು ಹಿಂಪಡೆಯಲು ಸಿದ್ಧವಿರುವುದಾಗಿ ಕಮಿಷನರ್‌ಗೆ ಪತ್ರ ಬರೆದಿತ್ತು. ಆದರೆ, ಅಂದು ದಾಖಲಾಗಿದ್ದ ಅದೇ ಸುಳ್ಳು ಮೊಕದ್ದಮೆಗಳನ್ನು ಮುಂದಿಟ್ಟು ಸುರತ್ಕಲ್ ಠಾಣಾಧಿಕಾರಿ ಚೆಲುವರಾಜು ಹೋರಾಟ ಸಮಿತಿಯ ಸಂಚಾಲಕ ಹಾಗೂ ನಿವೃತ್ತ ಅಧಿಕಾರಿ ಬಿ.ಎಸ್.ಹುಸೇನ್, ಹೋರಾಟ ಸಮಿತಿಯ ಸಹ ಸಂಚಾಲಕರಾದ ಜೋಕಟ್ಟೆ ಪಂಚಾಯತ್ ಸದಸ್ಯ ಅಬೂಬಕರ್ ಬಾವ, ಮೊಯ್ದಿನ್ ಶರೀಫ್ ಹಾಗೂ ವಿಜಯಾನಂದ ರಾವ್ ಅವರ ಮೇಲೆ ರೌಡಿ ಶೀಟ್ ತೆರೆದಿದ್ದಾರೆ. ಕುಖ್ಯಾತ ಕ್ರಿಮಿನಲ್‌ಗಳು, ಮತೀಯ ಗೂಂಡಾಗಳ ಮೇಲೆ ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಹೂಡಲಾಗುವ ಸದ್ವರ್ತನೆ, ಮುಚ್ಚಳಿಕೆ ಪ್ರಕರಣ ದಾಖಲಿಸಿದ್ದಾರೆ. 50 ಸಾವಿರ ರೂ. ಬಾಂಡ್, ಅಷ್ಟೇ ಮೌಲ್ಯದ ಆಸ್ತಿ ಹೊಂದಿರುವ ಜಾಮೀನುದಾರರನ್ನು ಒದಗಿಸುವಂತೆ ಸಮನ್ಸ್ ನೀಡಿದ್ದಾರೆ. ಅಲ್ಲದೆ, ಇವರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ನೋಟಿಸ್ ನೀಡಿ ಏಕ ವಚನದಲ್ಲಿ ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಬಿ.ಎಸ್.ಹುಸೇನ್, ಅಬೂಬಕರ್ ಬಾವ, ಶಂಶುದ್ದೀನ್, ಮೊಯ್ದಿನ್ ಶರೀಫ್ ಉಪಸ್ಥಿತರಿದ್ದರು.