ಮಾನಭಂಗ ಯತ್ನದ ದೂರು ಸುಳ್ಳು ಸಿಸಿ ಟಿವಿಯಿಂದ ಬಹಿರಂಗ.
ನೆಲ್ಯಾಡಿ, ಸೆ.15: ಇಲ್ಲಿನ ಮೊಬೈಲ್ ಶಾಪ್‌ವೊಂದರ ಮಾಲಕ ಮಾನಭಂಗಕ್ಕೆ ಯತ್ನಿಸಿದ್ದನೆಂಬ ಆರೋಪ ಸಿಸಿಟಿವಿ ದೃಶ್ಯಾವಳಿಯ ಮೂಲಕ ಸುಳ್ಳು ಎಂದು ಬಹಿರಂಗಗೊಂಡಿದೆ.
ಜು.10ರಂದು ಶಿರಾಡಿ ಮೂಲದ ಯುವತಿಯೋರ್ವಳು ನೆಲ್ಯಾಡಿಯ ಮೊಬೈಲ್ ಶಾಪ್‌ಗೆ ಕರೆನ್ಸಿ ಹಾಕಲು ತೆರಳಿದ್ದ ವೇಳೆ ಶಾಪ್‌ನಲ್ಲಿದ್ದ ಸಲೀಮ್ ಎಂಬವರು ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಲಾಗಿತ್ತು. ಯುವತಿ ನೀಡಿದ ದೂರಿಗೆ ತಕ್ಷಣ ಸ್ಪಂದಿಸಿದ ಪೊಲೀಸರು ಶಾಪ್‌ನಲ್ಲಿದ್ದ ಸಿಸಿ ಕ್ಯಾಮರಾವನ್ನು ವಶಪಡಿಸಿಕೊಂಡ ಘಟನೆ ನಡೆದಿತ್ತು. ಈ ನಡುವೆ ಹಿಂದೂ ಸಂಘಟನೆಯವರಿಂದ ಪೊಲೀಸರು ಆರೋಪಿಗಳ ಪರ ದುರ್ಬಲ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಎಸ್ಪಿಯವರಿಗೆ ದೂರು ಸಲ್ಲಿಸಿತ್ತು.
ನೆಲ್ಯಾಡಿ ಠಾಣೆಯಲ್ಲಿ ದೂರುದಾರ ಯುವತಿ ಹಾಗೂ ಹಿಂದೂ ಸಂಘಟನೆಯ ಮುಖಂಡರ ಸಮಕ್ಷಮ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಕೈಹಿಡಿದು ಎಳೆಯುವಂತಹ ಯಾವುದೇ ಘಟನೆಗಳು ಕಂಡುಬರದೇ, ಕೇವಲ ಹಣ ಕೊಡುವ ಹಾಗೂ ತೆಗೆದುಕೊಂಡು ಹೊರಹೋಗುವ ದೃಶ್ಯಾವಳಿ ಮಾತ್ರ ಕಂಡುಬಂದಿದೆ. ಈ ಸಂದರ್ಭ ಪುತ್ತೂರು ಎಎಸ್ಪಿ ರಿಷ್ಯಂತ್ ಯುವತಿ ಹಾಗೂ ಹಿಂದೂ ಸಂಘಟನೆಯ ಮುಖಂಡರಿಗೆ ತನಿಖೆಯು ನ್ಯಾಯಯುತವಾಗಿ ನಡೆಯುತ್ತಿದೆ ಎಂದು ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಮುಖಂಡರಾದ ರವಿಪ್ರಸಾದ ಶೆಟ್ಟಿ, ರವಿಚಂದ್ರ ಹೊಸವಕ್ಲು, ಹಾಗೂ ಯುವತಿಯ ಹೆತ್ತವರು ಉಪಸ್ಥಿತರಿದ್ದರು. ಪುತ್ತೂರು ಎಎಸ್ಪಿ ನಿರ್ದೇಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಲಕರ್ಣಿ, ಎಸ್ಸೈ ತಿಮ್ಮಪ್ಪ ನಾಕ್, ಹಾಗೂ ನೆಲ್ಯಾಡಿ ಹೊರಠಾಣೆಯ ಸಿಬ್ಬಂದಿ ಮಹಜರು ನಡೆಸಿದರು.
‘ಸುಳ್ಳು ಆರೋಪ ಹೊರಿಸಿ ತೇಜೋವಧೆಗೆ ಯತ್ನ’
ನೆಲ್ಯಾಡಿ ಪೇಟೆಯಲ್ಲಿ ಜವಾಬ್ದಾರಿಯುತ ವರ್ತಕನಾಗಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ನನ್ನ ಏಳಿಗೆಯನ್ನು ಸಹಿಸದ ವ್ಯಕ್ತಿಗಳು ಯುವತಿಯ ಮೂಲಕ ಸುಳ್ಳು ದೂರು ನೀಡಿ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಕಾನೂನಿಗೆ ಗೌರವ ಕೊಟ್ಟು ತನಿಖೆಗೆ ಎಲ್ಲಾ ರೀತಿಯಿಂದಲೂ ಸಹಕರಿಸಿದ್ದೇನೆ ಇದೀಗ ದೂರುದಾರರ ಹಾಗೂ ಅವರನ್ನು ಪ್ರಚೋದಿಸಿದ ವ್ಯಕ್ತಿಗಳ ಎದುರಲ್ಲೇ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ಆದರೆ ಅವರು ಆರೋಪಿಸಿದಂತಹ ಯಾವುದೇ ಮಾನಭಂಗದಂತಹ ಕೃತ್ಯಗಳು ನಡೆದಿಲ್ಲ ಎನ್ನುವುದು ಸಾಬೀತಾಗಿದೆ. ಈ ಪ್ರಕರಣದಲ್ಲಿ ನನ್ನ ತೇಜೋವಧೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುವಂತೆ ದೂರು ನೀಡಲಾಗುವುದು ಎಂದು ನೆಲ್ಯಾಡಿ ಝೀ ಮೊಬೈಲ್ ಶಾಪ್‌ನ ಮಾಲಕ ಸಲೀಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.