×
Ad

ಭೂತಾರಾಧನೆಯ ತೇಜೋವಧೆಗೆ ಪಾಣರ ಸಂಘ ವಿರೋಧ

Update: 2016-09-16 00:06 IST


ಉಡುಪಿ, ಸೆ.15: ಸಾಂಸ್ಕೃತಿಕ ವೇದಿಕೆಗಳಲ್ಲಿ ಭೂತಾರಾಧನೆಯನ್ನು ಮನೋರಂಜನೆಗಾಗಿ ಹಾಗೂ ಅವಹೇಳನಕಾರಿಯಾಗಿ ಪ್ರದರ್ಶಿಸ ಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾಪ್ರಕಾರಗಳಿಗೆ ನೀತಿಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ಜಿಲ್ಲೆಯ ಪಾಣರ ಯಾನೆ ನಲ್ಕೆಯವರ ಸಮಾಜ ಸೇವಾಸಂಘ ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಚ್.ಸಕರ ಪಾಣ, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಧರ್ಮವನ್ನು ನಿಂದಿಸುವ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಅವಕಾಶ ನೀಡಬಾರದು. ಸಂಘ ಸಂಸ್ಥೆಗಳು ಧರ್ಮ, ನಂಬಿಕೆ ಗಳನ್ನು ಅವಹೇಳನ ಮಾಡುವ ಕಲಾತಂಡಗಳಿಗೆ ಎಚ್ಚರಿಕೆ ನೀಡಬೇಕು. ಸಿನೆಮಾಗಳಲ್ಲಿ ಇಂತಹ ವಿಕೃತ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡಬೇಕು. ಜಿಲ್ಲಾಡಳಿತವು ಅನಾದಿ ಕಾಲದಿಂದ ತುಳು ನಾಡಿನಲ್ಲಿ ನಡೆದು ಬಂದ ಧರ್ಮ ಸಂಸ್ಕೃತಿಯನ್ನು ರಕ್ಷಿಸಬೇಕು ಎಂದರು.

ಛದ್ಮವೇಷ ಸ್ಪರ್ಧೆ, ನಾಟಕ, ಸಿನೆಮಾಗಳಲ್ಲಿ ಅಣಕಿಸುವ ರೀತಿಯಲ್ಲಿ ನಂಬಿಕೆಗಳ ಪಾವಿತ್ರಕ್ಕೆ ಧಕ್ಕೆ ತರಲಾಗುತ್ತಿದೆ. ದೈವದ ನರ್ತನ ಸೇವೆಗೆ ಬಳಸುವ ತಲೆಕಟ್ಟು, ತೊಳ್ಪಟ್ಟಿ, ಗಗ್ಗರ, ಖಡ್ಗ ಹಾಗೂ ಹಲವು ಬಗೆಯ ಪರಿಕರಗಳು ವಿಶೇಷವಾದ ಮಾನ್ಯತೆ ಪಡೆದಿದ್ದು, ಇವುಗಳನ್ನು ಬೀದಿರಸ್ತೆಗಳಲ್ಲಿ ಹಾಕಬಾರದು. ಅದರ ಮಹತ್ವವನ್ನು ಉಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೈವಾರಾಧನೆ ಸಮಿತಿಯ ಅಧ್ಯಕ್ಷ ಸಂಜೀವ ಪಟ್ಟಂ, ಸಾಧು ಮಂಚಿಕೆರೆ, ರಾಮ ಪಾಣ, ಮಾಧವ ಪಾಣ, ವಿಶು ಶೆಟ್ಟಿ ಅಂಬಲಪಾಡಿ ಉಪಸ್ಥಿತರಿದ್ದರು.
ದೈವಾರಾಧನೆಗೆ ಅಪಚಾರ: ಎಸ್ಪಿಗೆ ದೂರು

ಬೆಂಗಳೂರಿನ ಮಲ್ಲೇಶ್ವರಂನ ಬೀದಿಯಲ್ಲಿ ವಿವಿಧ ದೈವದ ವೇಷಧರಿಸಿ ಕುಣಿದು ದೈವಾರಾಧನೆಗೆ ಅಪಚಾರ ಮಾಡಿರುವ ಬಗ್ಗೆ ಕುಂದಾಪುರ ವಂಡಾರಿನ ಬಾಬು ಪಾಣ, ಹೊಸಂಗಡಿಯ ಸಂತೋಷ್ ಪಾಣ, ಬಿದ್ಕಲ್‌ಕಟ್ಟೆಯ ಶಿವರಾಮ ಪಾಣ ಮತ್ತು ಬಳಗದವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News