×
Ad

ಆದೇಶ ಪಾಲಿಸದಿದ್ದರೆ ಅಂತಿಮ ತೀರ್ಪು ನೀಡುವ ಸಂದರ್ಭ ಹಿನ್ನಡೆ: ಕಾಗೋಡು

Update: 2016-09-16 00:07 IST

ಉಡುಪಿ, ಸೆ.15: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಇಲ್ಲದಿದ್ದರೆ ಅಂತಿಮ ತೀರ್ಪು ನೀಡುವ ಸಂದರ್ಭ ರಾಜ್ಯಕ್ಕೆ ಹಿನ್ನಡೆಯಾಗಬಹುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಿಮನ್ ಹಿರಿಯ ಅನುಭವಸ್ಥ ವಕೀಲ. ಅವರ ಮಾತು ಕೇಳದಿರಲು ಸಾಧ್ಯವಿಲ್ಲ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಪ್ರಧಾನಿ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸೆ.28ರವರೆಗೆ ಕಾವೇರಿ ನೀರು ತಮಿಳುನಾಡಿಗೆ ಬಿಡಲೇಬೇಕಾಗಿದೆ. ಈ ಕುರಿತ ಅಂತಿಮ ತೀರ್ಮಾನ ಈ ತಿಂಗಳಲ್ಲಿ ಆಗುತ್ತದೆ. ತೀರ್ಮಾನದ ಪ್ರಕಾರ ನೀರು ಬಿಡುವ ಪ್ರಮಾಣ ಕಡಿಮೆ ಅಥವಾ ಹೆಚ್ಚಾಗಹುದು. ಆದರೆ ನಮಗೆ ನೀರಿನ ಕೊರತೆಯ ಸಮಸ್ಯೆಯಿದೆ. ಇಂತಹ ಸ್ಥಿತಿ ಎರಡು ಬಾರಿ ಎದುರಾಗಿತ್ತು. ಆದ್ದರಿಂದ ಈ ಕುರಿತು ಜಿಜ್ಞಾಸೆ ಮೂಡಿದೆ ಎಂದವರು ತಿಳಿಸಿದರು.

ಕೇಂದ್ರ ಸರಕಾರ ಈ ಕುರಿತು ಮಧ್ಯಪ್ರವೇಶಿಸು ವಂತೆ ಈಗಾಗಲೇ ಮುಖ್ಯಮಂತ್ರಿ ಒತ್ತಾಯ ಮಾಡಿ ದ್ದಾರೆ. ಮುಂದೆ ಸಾಧ್ಯವಾದರೆ ಅವರು ದಿಲ್ಲಿಗೆ ತೆರಳ ಲಿದ್ದಾರೆ ಎಂದು ಸಚಿವರು ಹೇಳಿದರು.

94ಸಿಸಿ ಅವಧಿ ವಿಸ್ತರಣೆ
ಗ್ರಾಮೀಣ ಪ್ರದೇಶದಲ್ಲಿ 94ಸಿ ಹಾಗೂ ನಗರ ಪ್ರದೇಶದಲ್ಲಿ 94ಸಿಸಿ ಕಾಯ್ದೆಯಡಿ ಅರ್ಜಿ ಸ್ವೀಕರಿ ಸುವ ಪ್ರಕ್ರಿಯೆ ಆರಂಭವಾಗಿದ್ದು, 94ಸಿಸಿಯಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಎರಡು ತಿಂಗಳುಗಳ ಕಾಲ ವಿಸ್ತರಿಸಲಾಗಿದೆ. ಅದೇ ರೀತಿ 94ಸಿಯಡಿ ಅರ್ಜಿ ಸಲ್ಲಿಸಲು ಅ.27 ಕೊನೆಯ ದಿನವಾಗಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಬಗರ್‌ಹುಕುಂಗೆ ಸಂಬಂಧಿಸಿ ಫಾರ್ಮ್ ನಂಬರ್ 50 ಮತ್ತು 53ರಲ್ಲಿ ಅರ್ಜಿ ಹಾಕಿದವರಿಗೆ ಕುಮ್ಕಿ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಸರಕಾರ ಆದೇಶ ನೀಡಿದೆ. 9/11 ಕಾಯ್ದೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಜನರಿಗೆ ತೊಂದರೆಯಾಗದಂತೆ ಜಾರಿಗೊಳಿಸಲಾಗುವುದು ಎಂದರು.

ಗೋಮಾಳ ಭೂಮಿ ಕಡಿಮೆಯಿರುವುದರಿಂದ ಜಾಗ ಮಂಜೂರು ಮಾಡದಂತೆ ತಡೆಹಿಡಿದು ಸರಕಾರ ಸುತ್ತೋಲೆ ಹೊರಡಿಸಿತ್ತು. ಇದೀಗ ಈ ಭೂಮಿಯಲ್ಲಿ ವಾಸವಾಗಿರುವವರಿಗೆ ಭೂಮಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಪೊಡಿ ಮುಕ್ತಗ್ರಾಮ ಕಾರ್ಯಕ್ರಮ ಕೂಡ ಉತ್ತಮವಾಗಿ ನಡೆಯುತ್ತಿದ್ದು, ಗ್ರಾಮದ ಎಲ್ಲ ವರ್ಗದ ಜಾಮೀನನ್ನು ಪೊಡಿ ಮುಕ್ತ ಮಾಡಲು ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಇನ್ನಷ್ಟು ಯಶಸ್ವಿಯಾಗಿ ನೆರವೇರಿಸಲು ಸರಕಾರ ಆದೇಶ ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News