ಸಾಮಾಜಿಕ ಬದಲಾವಣೆಯಲ್ಲಿ ನಾರಾಯಣಗುರುಗಳ ಪಾತ್ರ ಪ್ರಮುಖ: ಸಚಿವ ರೈ
ಮಂಗಳೂರು, ಸೆ.16: ಸಾಮಾಜಿಕ ಬದಲಾವಣೆಯಲ್ಲಿ ನಾರಾಯಣಗುರುಗಳು ನಿರ್ವಹಿಸಿದ ಪಾತ್ರ ಪ್ರಮುಖವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಗೋಕರ್ಣನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸರಕಾರದ ನೇತೃತ್ವದಲ್ಲಿ ಪ್ರಥಮವಾಗಿ ಹಮ್ಮಿಕೊಳ್ಳಲಾದ 162ನೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಮಹತ್ವ ನೀಡಿದ್ದ ಅವರು, ಸಮಾಜದಲ್ಲಿ ಅಸ್ಪಶ್ಯತೆ ನಿವಾರಣೆಗಾಗಿ ವಿಶೇಷ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರ ಸೈದ್ಧಾಂತಿಕ ವಿಚಾರಗಳ ಬಗ್ಗೆ ತಾನು ಅತ್ಯಧಿಕ ಅಭಿಮಾನ ಹೊಂದಿರುವುದಾಗಿ ಹೇಳಿದ ಅವರು, ಈ ಕಾರ್ಯಕ್ರಮ ಭಾವನಾತ್ಮಕವಾಗಿ ತನಗೆ ಸಂಸತ ನೀಡಿದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದ ಹಾದಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹಾಸ್ಟೆಲ್ ಸೌಲಭ್ಯ ದೊರೆಯದ ವಿದ್ಯಾರ್ಥಿಗಳಿಗೆ ತಲಾ 1,500 ರೂ.ಗಳ ಪ್ರೋತ್ಸಾಹ ಧನದ ಕಾರ್ಯಕ್ರಮವನ್ನು ರೂಪಿಸಿದೆ. ಈ ಸೌಲಭ್ಯದಡಿ ಹಿಂದುಳಿದ ವರ್ಗದ ಸುಮಾರು 2 ಲಕ್ಷಕ್ಕೂ ಅಧಿಕ ಮಕ್ಕಳು ಶಿಕ್ಷಣ ಮುಂದುವರಿಸಲು ಸಾಧ್ಯವಾಗಿದೆ. ಬಡತನ ಇನ್ನೂ ಜೀವಂತವಾಗಿರುವ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅನ್ನಭಾಗ್ಯ ವರವಾಗಿ ಪರಿಣಮಿಸಿದೆ. ಇದೀಗ ಮುಖ್ಯಮಂತ್ರಿಯವರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸರಕಾರದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆಗೆ ಆದೇಶ ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪಮೂಡಾದ ನಾರಾಯಣಗುರು ಜ್ಡಾನ ಮಂದಿರದ ರುವಾರಿ ಸಂಜೀವ ಪೂಜಾರಿ ಅವರ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿ ಈ ಸರಕಾರಿ ಆದೇಶಕ್ಕೆ ಮುಂದಾಗಿದ್ದಾರೆ ಎಂದು ಸಚಿವ ರೈ ಆದೇಶ ಪ್ರತಿಯನ್ನು ಸಭೆಯಲ್ಲಿ ಓದಿ ಹೇಳಿದರು.
ನಾರಾಯಣಗುರು ಜಯಂತಿ ಆಚರಣೆ ಹಿಂದುಳಿದವರಿಗೆ ಸರಕಾರದ ಕೊಡುಗೆ!
1854ರಲ್ಲಿ ಕೇರದಲ್ಲಿ ಜನಿಸಿದ ನಾರಾಯಣಗುರುಗಳು ಹಿಂದುಳಿದ ವರ್ಗದವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದ್ದ ಆ ಸಮಯದಲ್ಲಿ 1888ರಲ್ಲಿ ಪ್ರತ್ಯೇಕ ದೇವಸ್ಥಾನ ಕಟ್ಟಿ ಮನುಕುಲಕ್ಕೆ ಹೊಸ ಜೀವ ನೀಡಿದ್ದರು. 1912ರಲ್ಲ್ಲಿ ನಾರಾಯಣಗುರುಗಳ ಅಮೃತಹಸ್ತದಿಂದ ಶಿವಲಿಂಗದ ಪ್ರತಿಷ್ಠಾನೆಯೊಂದಿಗೆ ಕುದ್ರೋಳಿಯಲ್ಲಿ ಗೋಕರ್ಣನಾಥ ಕ್ಷೇತ್ರ ನಿರ್ಮಾಣಕ್ಕೆ ನಾಂದಿ ಹಾಡಲಾಯಿತು. ಪ್ರಸ್ತುತ ವಿಶ್ವಗುರುವಾಗಿ ಹೊರಹೊಮ್ಮಿರುವ ಬ್ರಹ್ಮಶ್ರೀ ನಾರಾಯಣಗುರು ಹೆಸರಿನಲ್ಲಿ ಕರ್ನಾಟಕ ಸರಕಾರವು ಸ್ವಾತಂತ್ರ ನಂತರದ ಸುದೀರ್ಘ ಅವಧಿಯ ಬಳಿಕ ಈ ವರ್ಷ ಸರಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ರಾಜ್ಯ ಸರಕಾರ ಹಿಂದುಳಿದ ಹಾಗೂ ಬಡಜನರಿಗೆ ಕೊಡುಗೆಯನ್ನು ನೀಡಿದೆ ಎಂದು ನಾರಾಯಣಗುರುಗಳ ಬಗ್ಗೆ ಉಪನ್ಯಾಸ ನೀಡಿದ ಹಿರಿಯ ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅಭಿಪ್ರಾಯಿಸಿದರು.
ಪ್ರೊ. ಎಂ.ಎಸ್. ಕೋಟ್ಯಾನ್ ಕೂಡಾ ನಾರಾಯಣಗುರುಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭ ಮುದ್ದು ಮೂಡುಬೆಳ್ಳೆ ನಿರ್ದೇಶನದಲ್ಲಿ ತಯಾರಿಸಲಾದ ನಾರಾಯಣಗುರುಗಳ ಜೀವನ ಸಾಧನೆ ಹಾಗೂ ಸಂದೇಶಗಳನ್ನು ಒಳಗೊಂಡ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುದ್ರೋಳಿ ಕ್ಷೇತ್ರದ ವಕ್ತಾರ ಹರಿಕೃಷ್ಣ ಬಂಟ್ವಾಳ, ಶಾಲಾ ಕಾಲೇಜುಗಳಲ್ಲಿ ನಾರಾಯಣ ಗುರುಗಳ ಕುರಿತಂತೆ ಪಠ್ಯಪುಸ್ತಕ ಅಳವಡಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಬಿ.ಎ. ಮೊಯ್ದೀನ್ ಬಾವ, ಮೇಯರ್ ಹರಿನಾಥ್, ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವೇದಮೂರ್ತಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಉಪಸ್ಥಿತರಿದ್ದರು.
ಪದ್ಮರಾಜ್ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.