ಕೋಡಿ: ಬ್ಯಾರೀಸ್ ಬಿ.ಎಡ್ ಕಾಲೇಜಿನಲ್ಲಿ ವಿಶ್ವ ಒಝೋನ್ ದಿನಾಚರಣೆ
ಕುಂದಾಪುರ, ಸೆ.16: ಕೋಡಿಯ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಒಝೋನ್ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಜಿ. ಕೆ. ಮೊಹಿದಿನ್ ಬ್ಯಾರಿ ಮೆಮೋರಿಯಲ್ ಅನುದಾನಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಮಾತನಾಡಿ, ಮನುಷ್ಯನ ಸ್ವಾರ್ಥ, ಭೋಗ ಜೀವನದಿಂದಾಗಿ ಈ ಪರಿಸರ ಹಾಳಾಗುತ್ತಿದೆ. ಇದರ ಪರಿಣಾಮವಾಗಿ ಮನುಷ್ಯ ಅನೇಕ ರೋಗ-ರುಜಿನಗಳಿಗೆ ಬಲಿಯಾಗುತ್ತಿದ್ದಾನೆ. ಆದ್ದರಿಂದ ನಾವೆಲ್ಲರು ಇಂದಿನಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಒಝೋನ್ ಪದರ ನಾಶ ಮಾಡುವುದನ್ನು ನಿಲ್ಲಿಸಿ, ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿ ಇಟ್ಟುಕೊಂಡು ಹೇಗೆ ನಮ್ಮ ಹಿರಿಯರು ಓರೆನ್ ಸಹಿತ ಭೂಮಿಯನ್ನು ನನಗೆ ಕೊಟ್ಟಿರುವ ಹಾಗೆ ನಾವು ಒಝೋನ್ ಸಹಿತ ಭೂಮಿಯನ್ನು ಮುಂದಿನ ಪೀಳಿಗೆಗೆ ಕೊಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2015-16ನೆ ಸಾಲಿನ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಾಜಿ. ಕೆ. ಮೊಹಿದಿನ್ ಬ್ಯಾರಿ ಮೆಮೋರಿಯಲ್ ಅನುದಾನಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಮತ್ತು ಕೋಡಿಯ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಕಲಾಶಿಕ್ಷಕ ರಮೇಶ ಹಾಂಡಾರನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಸನ್ಮಾನಿಸಿದರು.
ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್. ಸ್ವಾಗತಿಸಿದರು. ಬ್ಯಾರೀಸ್ ಡಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಫಿರ್ದೋಸ್ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಅನಿತಾ ವಿಶ್ವ ಓರೆನ್ ದಿನಾಚರಣೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಅಶ್ವಿನಿ ವಂದಿಸಿದರು. ಸುಮನಾ ಕಾರ್ಯಕ್ರಮವನ್ನು ನಿರೂಪಿಸಿದರು.