ಮಜ್ದೂರ್ ಸಂಘಟನೆಯನ್ನು ನೋಡುವ ರೀತಿಯನ್ನು ಬದಲಾಯಿಸಿಕೊಳ್ಳಿ: ಪಿ.ಕೇಶವ
ಪುತ್ತೂರು, ಸೆ.16: ಈ ಸಂಘಟನೆಯಡಿ ದುಡಿಯುವ ಎಲ್ಲಾ ಕಾರ್ಮಿಕ ವರ್ಗದವರು ಸಂಘಟನೆಯನ್ನು ನೋಡುವ ರೀತಿಯನ್ನು ಬದಲಾಯಿಸಿ ಸಂಘಟನೆಯ ಎಲ್ಲಾ ಹೋರಾಟ, ಕಾರ್ಯಕ್ರಮಗಳಿಗೆ ಬೆಂಬಲ ನೀಡಬೇಕಾಗಿದೆ ಎಂದು ದಲಿತ ಸಂಘರ್ಷ ರಾಜ್ಯ ಸಮಿತಿ ಸದಸ್ಯ ಪಿ.ಕೇಶವ ತಿಳಿಸಿದ್ದಾರೆ.
ಅವರು ಶುಕ್ರವಾರ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಕೆಎಸ್ಸಾರ್ಟಿಸಿ ಮಜ್ದೂರ್ ಸಂಘ ಪುತ್ತೂರು ವಿಭಾಗದ ಪ್ರಥಮ ಮಹಾಸಭೆ ಹಾಗೂ ಕಾರ್ಮಿಕರ ಸ್ನೇಹಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಎಸ್ಸಾರ್ಟಿಸಿ ಮಜ್ದೂರ್ ಸಂಘಟನೆಗೆ ಒಂದು ಬದ್ಧತೆಯಿದ್ದು, ಶಿಸ್ತಿನ ಸಂಘಟನೆಯಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ. ನಷ್ಟದ ಅಂಚಿನಲ್ಲಿದ್ದ ಕೆಎಸ್ಸಾರ್ಟಿಸಿಯಂತಹ ಉತ್ತಮ ಸಂಸ್ಥೆಯನ್ನು ಬಿಎಂಎಸ್ ಸಂಘಟನೆ ಮೂಲಕ ಉಳಿಸಿಕೊಂಡಿದೆ ಎಂದರು.
ಬಿಎಂಎಸ್ ಆಟೊ ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಮಾತನಾಡಿ, ಕಾರ್ಮಿಕ ವಿರೋಧ ನೀತಿ ಎಂಬುದು ಸುಳ್ಳು. ಕಾರ್ಮಿಕ ವಿರೋಧಿ ನೀತಿಯನ್ನು ಸರಕಾರ ಮಾಡಿಲ್ಲ. ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸರಕಾರ ಕಾರ್ಮಿಕರ ಪರವಾಗಿದೆ. ಕಾರ್ಮಿಕರ ಹೋರಾಟ ಫಲವಾಗಿ ಸರಕಾರ ವೇತನವನ್ನು ಶೇ.12 ರಷ್ಟು ಹೆಚ್ಚಿಸಿದೆ. ಇದನ್ನು ಶೇ.20 ಕ್ಕೆ ಏರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಹುಸೈನ್ ದಾರಿಮಿ ಮಾತನಾಡಿ ಈ ದೇಶದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಸಲು ಅನುಕೂಲವಿರುವ ಸಂಸ್ಥೆ ಇದ್ದರೆ ಅದು ಕೆಎಸ್ಸಾರ್ಟಿಸಿ. ಇದು ಅಧಿಕಾರಿಗಳ ವರ್ಗದವರ ಪ್ರಾಮಾಣಿಕ ಪ್ರಯತ್ನ ಹಾಗೂ ಕಾರ್ಮಿಕ ವರ್ಗದ ಶ್ರಮದ ಪಲವಾಗಿದೆ. ಕಾರ್ಮಿಕರನ್ನು ಬಿಟ್ಟು ಮಾಲಕರಿಲ್ಲ, ಮಾಲಕರನ್ನು ಬಿಟ್ಟು ಕಾರ್ಮಿಕರಿಲ್ಲ ಎಂಬ ಧ್ಯೇಯವನ್ನು ಕೆಎಸ್ಸಾರ್ಟಿಸಿ ಮಜ್ದೂರ್ ಸಂಘ ಅಳವಡಿಸಿಕೊಂಡು ದೇಶದ ಜನತೆಗೆ ಸೇವೆ ನೀಡುತ್ತಿದೆ ಎಂದರು.
ಸಂತ ಫಿಲೋಮಿನಾ ಕಾಲೇಜಿನ ಮುಖ್ಯ ರೆ.ಫಾ.ಅಂಥೋನಿ ಪ್ರಕಾಶ್ ಮೊಂತೆರೊ ಮಾತನಾಡಿ, ಕೆಎಸ್ಸಾರ್ಟಿಸಿ ಎಲ್ಲಾ ಧರ್ಮದ ಜನರಿಗೆ ಸೇವೆ ನೀಡುವ ಸಂಸ್ಥೆಯಾಗಿದೆ. ಅದರಲ್ಲೂ ವಿದ್ಯಾರ್ಥಿಗಳ ಜತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು.
ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಡಾ.ರೋಹಿಣಾಕ್ಷ ಶಿರ್ಲಾಲು ಮಾತನಾಡಿ, ಕಾರ್ಮಿಕ ವರ್ಗ ದೇಶದ ಶಕ್ತಿ, ಉಸಿರು. ಕಾರ್ಮಿಕ ವರ್ಗದಲ್ಲಿ ರಾಷ್ಟ್ರ, ದೇಶದ, ಸಂಸ್ಥೆಯ ಹಿತವಿದೆ. ರಾತ್ರಿ ಹಗಲೆನ್ನದೆ ಸಮಾಜದ ಎಲ್ಲಾ ಸ್ತರದ ಪ್ರಯಾಣಿಕರನ್ನು ಒಂದೂರಿಂದ ಇನ್ನೊಂದೆ ಸಾಗಿಸುವ ಕೆಎಸ್ಸಾರ್ಟಿಸಿ ಸಂಸ್ಥೆ ಕೇವಲ ಓರ್ವ ವ್ಯಕ್ತಿಗೋಸ್ಕರ ಉಳಿಯದೆ ಸಾಮಾನ್ಯ ವರ್ಗದ ಜನರ ಹಿತಕ್ಕಾಗಿ ಉಳಿಯಬೇಕಾಗಿದೆ ಎಂದರು.
ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಪುತ್ತೂರು ವಿಭಾಗದ ಗೌರವಾಧ್ಯಕ್ಷೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಪಾಲಿಟೆಕ್ನಿಕ್ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ಎಂ., ಸಂಘದ ಅಧ್ಯಕ್ಷ ಗಿರೀಶ ಮಳಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ದುಡಿದ ವಲೇರಿಯನ್ ಡಯಾಸ್, ಆದಂ ಹೆಂತಾರ್ ಹಾಗೂ ಬಾಸ್ಕರ ಬೊಳುವಾರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಎಸ್ಸಾರ್ಟಿಸಿ ಮಜ್ದೂರು ಸಂಘದ ಪುತ್ತೂರು ವಿಭಾಗದ ನೂತನ ಪದಾಧಿಕಾರಿಗಳಿಗೆ ಸಂಘದ ಸಂಕೇತದ ಬಾವುಟವನ್ನು ನೀಡುವ ಮೂಲಕ ಜವಾಬ್ದಾರಿ ನೀಡಲಾಯಿತು.
ಸಂಘಟನಾ ಕಾರ್ಯದರ್ಶಿ ಜಿ.ವಿ.ಭಟ್ ಪದಾಧಿಕಾರಿಗಳ ಪಟ್ಟಿಯನ್ನು ಓದಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂಜೀವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿಭಾಗದ ಉಪಾಧ್ಯಕ್ಷ ಶೇಷಪ್ಪ ಮೂಲ್ಯ ಸ್ವಾಗತಿಸಿದರು. ಸದಸ್ಯ ಸುಬ್ರಹ್ಮಣ್ಯ ಭಟ್ ವಂದಿಸಿದರು. ರಮೇಶ್ ಶೆಟ್ಟಿ ಕೆ. ಮತ್ತು ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.