ಜಿಲ್ಲಾಧಿಕಾರಿ ಆದೇಶ ಮರು ಪರಾಮರ್ಶೆಗೆ ಆಗ್ರಹ: ದಲಿತ ಸಂಘರ್ಷ ಸಮಿತಿ ವತಿಯಿಂದ ಧರಣಿ
ಪುತ್ತೂರು, ಸೆ.16: ನಗರದ ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರದ ಬಳಿಕ ಆ ಸ್ಥಳವನ್ನು ಅಂಬೇಡ್ಕರ್ ಭವನಕ್ಕೆ ಕಾದಿರಿಸುವಂತೆ ದಲಿತ ಸಂಘರ್ಷ ಸಮಿತಿಯು ತಾಲೂಕು ಮತ್ತು ಜಿಲ್ಲಾಮಟ್ಟದ ದಲಿತರ ಕುಂದು ಕೊರತೆಗಳ ಸಭೆಗಳಲ್ಲಿ ಮನವಿ ಸಲ್ಲಿಸಿದ್ದರೂ, ಜಿಲ್ಲಾಧಿಕಾರಿ ಅವರು ಈ ಸ್ಥಳವನ್ನು ಸಾರ್ವಜನಿಕ ಆಸ್ಪತ್ರೆಗೆ ಉಪಯೋಗಿಸಲು ಆದೇಶ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಗೆದ ಅನ್ಯಾಯವಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಈ ಆದೇಶ ಮರು ಪರಾಮರ್ಶೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಕೂಸಪ್ಪ ಆಗ್ರಹಿಸಿದ್ದಾರೆ.
ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಮಿನಿವಿಧಾನ ಸೌಧ ಮುಂಭಾಗದಲ್ಲಿ ಶುಕ್ರವಾರ ನಡೆದ ಧರಣಿಯಲ್ಲಿ ಮಾತನಾಡಿದರು. ನಗರದ ಹೃದಯಭಾಗದಲ್ಲಿ ದಲಿತರ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗಲು ಅಂಬೇಡ್ಕರ್ ಭವನ ನಿರ್ಮಿಸುವಂತೆ ಹದಿನೈದು ವರ್ಷಗಳಿಂದ ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸಿವೆ. ಆದರೆ ಅದಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.
ತಾಲೂಕು ಸಂಚಾಲಕ ಆನಂದ ಮಿತ್ತಬೈಲು ಮಾತನಾಡಿ, ಸಬ್‌ರಿಜಿಸ್ಟ್ರಾರ್ ಕಚೇರಿ ಮಿನಿವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವ ಸಂದರ್ಭದಲ್ಲಿ ಆ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಅವಕಾಶ ನೀಡುವಂತೆ ದಸಂಸ ಮನವಿ ಸಲ್ಲಿಸಿದೆ. ಆದರೆ ನಮ್ಮ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಜಿಲ್ಲಾಧಿಕಾರಿ ಅವರನ್ನು ಎರಡನೆ ಬಾರಿ ಭೇಟಿಯಾದಾಗ ನೀಡಿದ ವೌಖಿಕ ಭರವಸೆ ಕೂಡ ಸುಳ್ಳಾಗಿದೆ ಎಂದು ಅವರು ಆರೋಪಿಸಿದರು. ಬಳಿಕ ತಹಶೀಲ್ದಾರ್ ಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಧರಣಿಯಲ್ಲಿ ತಾಲೂಕು ಸಂಘಟನಾ ಸಂಚಾಲಕ ಹರೀಶ್ ಅಂಕಜಾಲ್, ಬಾಬು ಎನ್. ಸವಣೂರು, ಡಿಎಸ್‌ಎಸ್ ಜಿಲ್ಲಾ ಮುಖಂಡ ಸೇಸಪ್ಪ ನೆಕ್ಕಿಲು, ತಾಲೂಕು ಮಹಿಳಾ ಸಂಚಾಲಕಿ ಯಶೋಧಾ, ಗಣೇಶ್ ಗುರಿಯಾನ, ಪುಟ್ಟಣ್ಣ, ಮೀನಾಕ್ಷಿ ಬಾಂಬಿಲ ಮೊದಲಾದವರು ಉಪಸ್ಥಿತರಿದ್ದರು.