ವ್ಯಕ್ತಿಯ ಕುತ್ತಿಗೆಯಿಂದ ಹೋಗಿ ಬೆನ್ನಲ್ಲಿ ಹೊರಬಂದ 3 ಅಡಿ ಉದ್ದದ ಬಿದಿರು ! ಬಳಿಕ ಏನಾಯಿತು ನೋಡಿ

Update: 2016-09-16 13:41 GMT

ಕೋಲ್ಕತಾ,ಸೆ.16: ಮೂರಡಿ ಉದ್ದದ ಬಿದಿರು ಕುತ್ತಿಗೆಯ ಎಡಭಾಗದಿಂದ ಎದೆಯೊಳಗೆ ಹೊಕ್ಕಿ ಬೆನ್ನಿನಲ್ಲಿ ಹೊರಗೆ ಬಂದಿದ್ದ ಬಸ್ ಚಾಲಕ ಲಕ್ಮೀಕಾಂತ ಘೋಷ್(50)ಗೆ ಇಲ್ಲಿಯ ಸರಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯ ವೈದ್ಯರು ಮೂರು ಗಂಟೆಗಳ ಸುದೀರ್ಘ ಕಾಲ ಜಟಿಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಆತನ ಪ್ರಾಣವನ್ನು ಉಳಿಸಿದ್ದಾರೆ. ಗುರುವಾರ ಈ ಶಸ್ತ್ರಚಿಕಿತ್ಸೆ ನಡೆದಿದ್ದು,ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತನಿಗೆ ಜೀವರಕ್ಷಕ ಯಂತ್ರವನ್ನು ಅಳವಡಿಸಲಾಗಿದ್ದು, 48ಗಂಟೆಗಳ ಕಾಲ ನಿಗಾ ಇರಿಸಲಾಗುತ್ತಿದೆ.

ಈ ಘಟನೆಯು ಕಬ್ಬಿಣದ ಸರಳುಗಳು ಮತ್ತು ಬಿದಿರುಗಳಂತಹ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳು ಇತರ ವಾಹನಗಳ ಚಾಲಕರ ಜೀವಗಳಿಗೆ ಒಡ್ಡುತ್ತಿರುವ ಗಂಭೀರ ಅಪಾಯದತ್ತ ಮತ್ತೊಮ್ಮೆ ಎಲ್ಲರ ಗಮನ ಹೊರಳುವಂತೆ ಮಾಡಿದೆ. 2008ರಲ್ಲಿ ಇಂತಹುದೇ ಘಟನೆಯೊಂದರಲ್ಲಿ ಕಲಕತ್ತಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಇನ್ನೋರ್ವ ಚಾಲಕನ ಎದೆಯೊಳಗೆ ತೂರಿದ್ದ ಐದಡಿ ಉದ್ದದ ಕಬ್ಬಿಣದ ಸರಳನ್ನು ಹೊರತೆಗೆಯುವ ಮೂಲಕ ಆತನ ಜೀವವನ್ನುಳಿಸಿದ್ದರು.

ಖಾಸಗಿ ಬಸ್ಸೊಂದರ ಚಾಲಕನಾಗಿರುವ ಘೋಷ್‌ನನ್ನು ಬುಧವಾರ ಪೂರ್ವಾಹ್ನ ಆಸ್ಪತ್ರೆಗೆ ತರಲಾಗಿತ್ತು. ಪಶ್ಚಿಮ ಮಿಡ್ನಾಪುರದ ಹೇರಿಯಾ ಬಳಿ ಆತ ಚಲಾಯಿಸುತ್ತಿದ್ದ ಬಸ್ಸಿಗೆ ಬಿದಿರು ತುಂಬಿದ್ದ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಲಾರಿಯಿಂದ ಹೊರಗೆ ಬಂದಿದ್ದ ಬಿದಿರೊಂದು ನೇರವಾಗಿ ಆತನ ದೇಹದಲ್ಲಿ ಹೊಕ್ಕಿತ್ತು.

 ಬೆನ್ನಿನಿಂದ ಬಿದಿರಿನಭಾಗ ಹೊರಕ್ಕೆ ಇಣುಕಿದ್ದರಿಂದ ಘೋಷ್‌ನನ್ನು ಮಲಗಿಸಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿರಲಿಲ್ಲ. ಆತನಿಗೆ ಕುಳಿತ ಸ್ಥಿತಿಯಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದರಿಂದ ಸಾಮಾನ್ಯ ಅರಿವಳಿಕೆ ನೀಡುವ ದಾರಿಯೂ ಉಳಿದಿರಲಿಲ್ಲ. ಗಾಯಾಳು ತೀವ್ರ ನೋವನ್ನು ಅನುಭವಿಸುತ್ತಿದ್ದ ಮತ್ತು ವಿಪರೀತ ರಕ್ತಸ್ರಾವವಾಗುತ್ತಲೇ ಇತ್ತು. ಹೀಗಾಗಿ ಗಂಟೆಗಳ ಕಾಲ ಸಮಾಲೋಚನೆ ನಡೆಸಿದ ವೈದ್ಯರ ತಂಡ ಕುತ್ತಿಗೆ ಬಳಿ ಪುಟ್ಟ ರಂಧ್ರವೊಂದನ್ನು ಮಾಡಿ ಆತನ ಶ್ವಾಸನಾಳದ ಮೂಲಕ ಅರಿವಳಿಕೆ ಮದ್ದು ನೀಡಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ಪ್ರಕಾಶ ಸಾಂಕಿ ತಿಳಿಸಿದರು.

ಅದೃಷ್ಟವಶಾತ ಬಿದಿರು ಆತನ ಹೃದಯ ಮತ್ತು ಶ್ವಾಸಕೋಶಗಳಿಗೆ ಯಾವುದೇ ಹಾನಿಯನ್ನುಂಟು ಮಾಡಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News