ತುರ್ತು ಸಂದರ್ಭದಲ್ಲೂ ಕೈಚೀಲಗಳನ್ನು ಹುಡುಕಿ ಭಾರತೀಯ ಪ್ರಯಾಣಿಕರು ಕೆಳಗಿಳಿದರು
ದುಬೈ, ಸೆ. 16: ದುಬೈಯಲ್ಲಿ ಕಳೆದ ತಿಂಗಳು ಅಪ್ಪಳಿಸುವ ರೀತಿಯಲ್ಲಿ ಭೂಸ್ಪರ್ಶ ಮಾಡಿದ್ದ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಯಾಣಿಕರ ವರ್ತನೆ ಭಾರೀ ಟೀಕೆಗೆ ಗುರಿಯಾಗಿದೆ.
ಘಟನೆಯ ಬಗ್ಗೆ ತನಿಖೆ ನಡೆಸಿರುವ ಯುಎಇಯ ವಾಯುಯಾನ ಅಧಿಕಾರಿಗಳು, ಸಾವು-ಬದುಕಿನ ಸಂದರ್ಭದಲ್ಲೂ ಭಾರತೀಯರು ತುರ್ತಾಗಿ ವಿಮಾನದಿಂದ ಇಳಿಯುವ ಬದಲು ತಮ್ಮ ಲಗೇಜ್‌ಗಳನ್ನು ಹುಡುಕುತ್ತಿದ್ದರು ಎಂಬ ಅಂಶದ ಬಗ್ಗೆ ಗಮನ ಸೆಳೆದಿದ್ದಾರೆ.
ಇಕೆ-521 ವಿಮಾನ ಆಗಸ್ಟ್ 3ರಂದು ತಿರುವನಂತಪುರಂನಿಂದ ದುಬೈಗೆ 282 ಪ್ರಯಾಣಿಕರನ್ನು ಹೊತ್ತುಕೊಂಡು ಹಾರುತ್ತಿತ್ತು. ಆ ಪೈಕಿ 226 ಮಂದಿ ಭಾರತೀಯರು.
ದುಬೈ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಕೆಲವೇ ನಿಮಿಷಗಳಲ್ಲಿ ವಿಮಾನ ಬೆಂಕಿಗಾಹುತಿಯಾಗಿತ್ತು.
ಪವಾಡಸದೃಶ ರೀತಿಯಲ್ಲಿ, ವಿಮಾನದಲ್ಲಿ ಬೆಂಕಿ ಹೊತ್ತಿಕೊಳ್ಳುವ ಮೊದಲೇ ಪ್ರಯಾಣಿಕರನ್ನು ತೆರವುಗೊಳಿಸಲಾಗಿತ್ತು. ಈ ಮಹತ್ವದ ಕ್ಷಣಗಳಲ್ಲಿನ ಪ್ರಯಾಣಿಕರ ನಡವಳಿಕೆ ಬಗ್ಗೆ ಘಟನೆಯ ತನಿಖೆ ನಡೆಸಿರುವ ಯುಎಇ ನಾಗರಿಕ ವಾಯುಯಾನ ಪ್ರಾಧಿಕಾರ ಮಹತ್ವದ ಟಿಪ್ಪಣಿಯೊಂದನ್ನು ತಯಾರಿಸಿದೆ.
ನಿಮ್ಮ ಕೈಚೀಲಗಳನ್ನು ಬಿಟ್ಟು ವಿಮಾನದಿಂದ ಹೊರಗೋಡಿ ಎಂಬುದಾಗಿ ವಿಮಾನ ಸಿಬ್ಬಂದಿ ಗೋಗರೆಯುತ್ತಿದ್ದರೂ, ಪ್ರಯಾಣಿಕರು ಆರಾಮವಾಗಿ ತಮ್ಮ ಚೀಲಗಳನ್ನು ಹುಡುಕಿ ತೆಗೆದು ಹೇಗೆ ಹೊರನಡೆದರು ಎಂಬ ಬಗ್ಗೆ ವರದಿ ಬೆಳಕು ಚೆಲ್ಲಿದೆ.
ವರದಿಯು ಭಾರತೀಯರನ್ನು ಹೆಸರಿಸಿಲ್ಲವಾದರೂ, ಅದು ಯಾರ ಬಗ್ಗೆ ಮಾತನಾಡುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಯಾಕೆಂದರೆ, ವಿಮಾನ ಪ್ರಯಾಣಿಕರ ಪೈಕಿ 80 ಶೇಕಡಷ್ಟು ಮಂದಿ ಭಾರತೀಯರು.
‘‘ವಿಮಾನ ರನ್‌ವೇಗೆ ಅಪ್ಪಳಿಸಿ ರನ್‌ವೇಯಿಂದ ಹೊರಗೆ ಜಾರಿದಾಗ, ಪ್ರಯಾಣಿಕರು ತಮ್ಮ ಸೀಟ್‌ಬೆಲ್ಟ್‌ಗಳನ್ನು ಬಿಚ್ಚಿ ಎದ್ದು ನಿಲ್ಲಲು ಆರಂಭಿಸಿರು. ತಮ್ಮ ಆಸನಗಳಲ್ಲಿಯೇ ಇರುವಂತೆ ಘೋಷಣೆ ಮಾಡಲಾಯಿತು. ವಿಮಾನ ನಿಲುಗಡೆಗೆ ಬಂದಾಗ, ಕೆಲವು ಪ್ರಯಾಣಿಕರು ತಮ್ಮ ವಸ್ತುಗಳನ್ನು ಹಿಡಿದುಕೊಂಡು ಚೀರುತ್ತಿದ್ದರು ಹಾಗೂ ಬಾಗಿಲು ತೆರೆಯುವಂತೆ ವಿಮಾನ ಸಿಬ್ಬಂದಿಯನ್ನು ಕೇಳುತ್ತಿದ್ದರು’’ ಎಂದು ವರದಿ ಹೇಳಿದೆ.
‘‘ಸಿಬ್ಬಂದಿ ವಿಮಾನದ ಸುರಕ್ಷಾ ಕ್ರಮಗಳನ್ನು ಪಾಲಿಸುತ್ತಿದ್ದರು. ಅದರ ಪ್ರಕಾರ, ಪ್ರಯಾಣಿಕರನ್ನು ವಿಮಾನದಿಂದ ತೆರವುಗೊಳಿಸುವಾಗ ಕೈಚೀಲಗಳನ್ನು ಒಯ್ಯುವಂತಿಲ್ಲ. ತಮ್ಮ ಚೀಲಗಳನ್ನು ಬಿಟ್ಟುಬಿಡುವಂತೆ ಸಿಬ್ಬಂದಿ ಸೂಚಿಸಿದರು. ಆದರೆ, ತಮ್ಮ ಕೈಚೀಲಗಳನ್ನು ಹಿಡಿದುಕೊಂಡೇ ಹೆಚ್ಚಿನ ಪ್ರಯಾಣಿಕರು ವಿಮಾನದಿಂದ ಇಳಿದರು’’ ಎಂದು ಅದು ತಿಳಿಸಿದೆ.