ಹಿಲರಿಗೆ ಬೆಂಬಲ ಘೋಷಿಸಿದ ಲಂಡನ್ ಮೇಯರ್ ಸಾದಿಕ್ ಖಾನ್
Update: 2016-09-16 20:11 IST
ಶಿಕಾಗೊ, ಸೆ. 16: ಲಂಡನ್‌ನ ಪ್ರಥಮ ಮುಸ್ಲಿಮ್ ಮೇಯರ್ ಸಾದಿಕ್ ಖಾನ್ ಗುರುವಾರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನೀಡುವಂಥ ಮುಸ್ಲಿಮ್ ವಿರೋಧಿ ನಿಲುವುಗಳು ‘‘ಐಸಿಸ್‌ಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ’’ ಎಂದಿದ್ದಾರೆ.
ಅಮೆರಿಕಕ್ಕೆ ಪ್ರಥಮ ಭೇಟಿ ನೀಡಿದ ಸಂದರ್ಭದಲ್ಲಿ ಶಿಕಾಗೊದಲ್ಲಿ ತಂಗಿದ ಖಾನ್, ತಾನು ಹಿಲರಿ ಅವರ ದೊಡ್ಡ ಅಭಿಮಾನಿ ಎಂದು ಹೇಳಿದರು ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ವಿಜಯಿಯಾಗುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
‘‘ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ, ಅಮೆರಿಕದ ಅಧ್ಯಕ್ಷರಾಗಲು ಅವರು ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ’’ ಎಂದು ಭಾಷಣ ಕಾರ್ಯಕ್ರಮವೊಂದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಂಡನ್ ಮೇಯರ್ ನುಡಿದರು.