ಬಲೂಚ್ ನಾಯಕರಿಗೆ ಭಾರತೀಯ ಪೌರತ್ವ?

Update: 2016-09-16 14:51 GMT

ಇಸ್ಲಾಮಾಬಾದ್, ಸೆ. 16: ಬಲೂಚ್ ನಾಯಕ ಬ್ರಹಂಡಾಗ್ ಬುಗ್ತಿ ಭಾರತೀಯ ಪೌರತ್ವವನ್ನು ಪಡೆಯಲಿದ್ದಾರೆ ಎಂದು ಪಾಕಿಸ್ತಾನ ಸುದ್ದಿ ಚಾನೆಲ್ ‘ಜಿಯೋ ನ್ಯೂಸ್’ ಗುರುವಾರ ತಡರಾತ್ರಿ ವರದಿ ಮಾಡಿದೆ.

ಭಾರತೀಯ ಅಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆಗಳು ನಡೆದ ಬಳಿಕ, ಈಗ ಸ್ವಿಝರ್‌ಲ್ಯಾಂಡ್‌ನಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿರುವ ಬುಗ್ತಿಗೆ ಭಾರತ ಆಶ್ರಯ ನೀಡಲು ಮುಂದಾಗಿದೆ ಎಂದು ಅದು ತಿಳಿಸಿದೆ.

ಶೇರ್ ಮುಹಮ್ಮದ್ ಬುಗ್ತಿ ಮತ್ತು ಅಝೀಝುಲ್ಲಾ ಬುಗ್ತಿ ಸೇರಿದಂತೆ ಈಗ ಸ್ವಿಝರ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಬುಗ್ತಿ ಅವರ ಬಲಗೈ ಬಂಟರಿಗೂ ಭಾರತ ಪೌರತ್ವ ನೀಡಲಿದೆ ಎಂದು ಮೂಲಗಳು ‘ಜಿಯೋ ನ್ಯೂಸ್’ಗೆ ಹೇಳಿವೆ.

ಬ್ರಹಂಡಾಗ್ ನಿಷೇಧಿತ ಬಲೂಚ್ ರಿಪಬ್ಲಿಕನ್ ಪಾರ್ಟಿ (ಬಿಆರ್‌ಪಿ)ಯ ಸ್ಥಾಪಕರಾಗಿದ್ದಾರೆ.

ಬಲೂಚಿಸ್ತಾನ ಪ್ರಾಂತದಲ್ಲಿ ಪಾಕಿಸ್ತಾನಿ ಪಡೆಗಳು ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆಯನ್ನು ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ಮೊದಲೇ, ಅಂದರೆ ಈ ವರ್ಷದ ಆರಂಭದಿಂದಲೇ ಪೌರತ್ವ ನೀಡುವ ವಿಷಯದಲ್ಲಿ ಭಾರತೀಯ ಅಧಿಕಾರಿಗಳು ಬ್ರಹಂಡಾಗ್‌ರೊಂದಿಗೆ ಮಾತುಕತೆ ನಡೆಸುತ್ತಾ ಬಂದಿದ್ದಾರೆ ಎಂದು ಟಿವಿ ಚಾನೆಲ್ ವರದಿ ಮಾಡಿದೆ.

‘‘ಪಾಕಿಸ್ತಾನದ ವಿರುದ್ಧ ಪ್ರಚಾರ ನಡೆಸಲು ಹಾಗೂ ನಮ್ಮ ಹೋರಾಟಕ್ಕೆ ಬೆಂಬಲ ಪಡೆಯಲು ಭಾರತೀಯ ದಾಖಲೆಪತ್ರಗಳನ್ನು ಬಳಸಿ ನಾವು ಜಗತ್ತಿನಾದ್ಯಂತ ಸುತ್ತುತ್ತೇವೆ. ನಮಗೆ ನೀಡಿರುವ ಬೆಂಬಲಕ್ಕಾಗಿ ನಾವು ನರೇಂದ್ರ ಮೋದಿಗೆ ಬಹಿರಂಗವಾಗಿ ಕೃತಜ್ಞತೆ ಸಲ್ಲಿಸಿದ್ದೇವೆ ಹಾಗೂ ನಾವು ಇನ್ನು ಯಾವುದನ್ನೂ ಮುಚ್ಚಿಡುವುದಿಲ್ಲ. ನಮಗೆ ಬೇರೆ ಆಯ್ಕೆಯಿಲ್ಲ. ನಾವು ಮೋದಿಗೆ ನೀಡುವ ಬೆಂಬಲ ಹಾಗೂ ಅವರು ನಮಗೆ ನೀಡುವ ಬೆಂಬಲದ ಬಗ್ಗೆ ನಮ್ಮ ವಿರೋಧಿಗಳು ಏನು ಯೋಚಿಸುತ್ತಾರೆ ಎನ್ನುವುದನ್ನು ನಾವು ಲೆಕ್ಕಿಸುವುದಿಲ್ಲ’’ ಎಂದು ಬಿಆರ್‌ಪಿಯ ಮೂಲವೊಂದು ಹೇಳಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News