ಸೆ.18ರಂದು ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ ರಜತ ಸಂಭ್ರಮ
ಮಂಗಳೂರು, ಸೆ.16: ನಗರದ ಲ್ಯಾಂಡ್‌ಲಿಂಕ್ಸ್ ಗೃಹ ನಿರ್ಮಾಣ ಸಂಸ್ಥೆಯ ಕಳೆದ ಮೂರೂವರೆ ದಶಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸಾರ್ಹ ಬ್ರಾಂಡ್ ಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಯ ಮೂಲಕ 1991ರಲ್ಲಿ ದೇರೇಬೈಲ್‌ನ ಕೊಂಚಾಡಿ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ ನಿರ್ಮಾಣ ಆರಂಭಗೊಂಡಿದ್ದು 2000ನೆ ಇಸವಿಯಲ್ಲಿ ಪೂರ್ಣಗೊಂಡಿದೆ. ಪ್ರಸಕ್ತ 2,500ಕ್ಕೂ ಅಧಿಕ ಕುಟುಂಬಗಳು ಇಲ್ಲಿ ನೆಲೆಸಿವೆ. ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ 25ನೆ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸೆ.18ರಂದು ಬೆಳಗ್ಗೆ 9:30ಕ್ಕೆ ರಜತ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಕೃಷ್ಣ ಪಾಲೆಮಾರ್ ತಿಳಿಸಿದ್ದಾರೆ.
ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ನಾಗಾಲ್ಯಾಂಡ್‌ನ ರಾಜ್ಯಪಾಲ ಪಿ.ಬಿ.ಆಚಾರ್ಯ, ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ , ಸ್ಥಳೀಯ ಮನಪಾ ಸದಸ್ಯ ರಾಜೇಶ್ ಕೊಂಚಾಡಿ ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಸಮಾರಂಭದ ಮುನ್ನಾದಿನ ಶನಿವಾರ ಸಂಜೆ 7:30ಕ್ಕೆ ಟೌನ್‌ಶಿಪ್‌ನಲ್ಲಿ ಸಾಂಸ್ಕ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಲ್ಯಾಂಡ್‌ಲಿಂಕ್ಸ್ 2004ರಿಂದ ಫ್ಲಾಟ್‌ಗಳ ನಿರ್ಮಾಣವನ್ನು ಪ್ರಾಂಭಿಸಿದ್ದು, ಇದುವರೆಗೆ 1,000ಕ್ಕೂ ಅಧಿಕ ಪ್ಲಾಟ್‌ಗಳನ್ನು ನಿರ್ಮಿಸಿ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ನೀಡುತ್ತಾ ಬಂದಿದೆ. ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ ರಜತ ಸಂಭ್ರಮಾಚರಣೆಯ ಸಂದರ್ಭದಲ್ಲಿ ಎರಡು ಹೊಸ ವಸತಿ ಸಮುಚ್ಚಯಗಳಾದ ಗ್ರೀನ್ ಪಾರ್ಕ್ -1 ಮತ್ತು ಪಿನ್ಯಾಕಲ್ ಎ ಮತ್ತು ಬಿ ಉದ್ಘಾಟನೆಯನ್ನು ಹಮ್ಮಿಕೊಂಡಿದೆ ಎಂದು ಪಾಲೆಮಾರ್ ತಿಳಿಸಿದರು.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಲ್ಯಾಂಡ್ ಲಿಂಕ್ಸ್ ದೇರೆಬೈಲ್‌ನಲ್ಲಿ ಗ್ರೀನ್ ಪಾರ್ಕ್ -1 ಮತ್ತು ಪಿನ್ಯಾಕಲ್ ಎ ಮತ್ತು ಬಿ ಉದ್ಘಾಟನೆಯನ್ನು ಹಮ್ಮಿಕೊಂಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗ್ರೀನ್ ಪಾರ್ಕ್ -2 ಯೋಜನೆಗೆ ಚಾಲನೆ ನೀಡಲಾಗುವುದು.ಗ್ರೀನ್ ಪಾರ್ಕ್ -1 ವಸತಿ ಯೋಜನೆಯ ಮೂಲಕ ಕೇವಲ 15 ಲಕ್ಷ ರೂ ವೆಚ್ಚದಲ್ಲಿ ಮಧ್ಯಮ ವರ್ಗದ ಜನತೆಗೆ ವಸತಿ ಗೃಹವನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರೀನ್ ಪಾರ್ಕ್ -2ರಲ್ಲಿ ಕೇವಲ 18ಲಕ್ಷ ರೂ. ವೆಚ್ಚದಲ್ಲಿ ಗ್ರಾಹಕರಿಗೆ ಮನೆ ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಗ್ರೀನ್ ಪಾರ್ಕ್ -2 ಯೋಜನೆಯಲ್ಲಿ ಸೋಲಾರ್ ವಾಟರ್ ಹಿಟರ್, ಜಿಮ್, ಇಂಡೋರ್ ಗೇಮ್ಸ್, ಆಟದ ಮೈದಾನ, ಮಲ್ಟಿ ಪರ್ಪಸ್ ಪಾರ್ಟಿ ಹಾಲ್, ಸಿ.ಸಿ.ಕ್ಯಾಮರಾ ಹಾಗೂ ಬೋರ್‌ವೆಲ್ ಮೂಲಕ ನೀರು ಪೂರೈಕೆಯನ್ನು ಒಳಗೊಂಡಿದೆ ಎಂದರು.
ಜನಸಾಮಾನ್ಯರು ಕೈಗೆಟುಕುವ ದರದಲ್ಲಿ ಮನೆ ಹೊಂದುವಂತಾಗಲು ಕುಡುಪುವಿನಲ್ಲಿ 10ಲಕ್ಷ ರೂ.ಗೆ ಮನೆ ಒದಗಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಯೋಜನೆಯನ್ವಯ 250 ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ. ಕಿನ್ನಿಗೋಳಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ 1,000 ನಿವೇಶನಗಳನ್ನು ರೂಪಿಸಿ ಗ್ರಾಹಕರಿಗೆ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ .ಉರ್ವ ಮಠದಕಣಿಯ ಅಶೋಕ್ ಪಾರ್ಕ್, ಕೊಡಿಯಾಲಗುತ್ತು ವೆಸ್ಟ್ ರಾಯಲ್ ಫಾರ್ಮ್ಸ್ , ಸುರತ್ಕಲ್ ಬಸ್ ನಿಲ್ದಾಣದ ಬಳಿಯ ಪರ್ಲ್, ಏರ್‌ಪೋರ್ಟ್ ರಸ್ತೆಯ ಹಿಲ್ ಪಾಯಿಂಟ್ ಎಪಾರ್ಟ್ ಮೆಂಟ್ ಸಂಸ್ಥೆಯ ಇತರ ಯೋಜನೆಗಳಾಗಿವೆ ಎಂದು ಕೃಷ್ಣ ಪಾಲೆಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲ್ಯಾಂಡ್ ಲಿಂಕ್ಸ್‌ನ ಆಡಳಿತ ನಿರ್ದೇಶಕ ಪ್ರದೀಪ್ ಪಾಲೆಮಾರ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೃಷ್ಣ ರಾಜ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.