×
Ad

ವಿದ್ಯಾರ್ಥಿಗಳಿಗೆ ಇಂಗು ಗುಂಡಿಯ ಬಗ್ಗೆ ಅರಿವು ಕಾರ್ಯಕ್ರಮ

Update: 2016-09-16 21:32 IST

ಮಂಗಳೂರು, ಸೆ.16: ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮತ್ತು ಜಲ ಸಾಕ್ಷರತಾ ಆಂದೋಲನ ಮಂಗಳೂರು ವತಿಯಿಂದ ನಗರದ ಜಿ.ಪಂ. ಸಭಾಂಗಣದಲ್ಲಿ ಜೀವ ಜಲ ಮರುಪೂರಣ ಅಭಿಯಾನ ಕಾರ್ಯಕ್ರಮ ನಡೆಯಿತು.

ಜಲಸಂರಕ್ಷಣಾ ತಜ್ಞ ಶ್ರೀಪಡ್ರೆ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಪ್ರೌಢ ಶಾಲೆಗಳ ಮುಖ್ಯಸ್ಥರು, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು ಜಲ ಮರುಪೂರಣ ಕುರಿತಂತೆ ತಮ್ಮ ಅನುಭವವನ್ನು ಹಂಚಿಕೊಂಡರು.

ಬಂಟ್ವಾಳದ ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲಾ ಮುಖ್ಯಗುರು ರಮೇಶ್ ಬಾಯಾರು ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಇಂಗು ಗುಂಡಿಯ ಬಗ್ಗೆ ಅರಿವು ಮೂಡಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಮಾವು, ಹಲಸು, ಸಾಗುವಾನಿ, ನೆಲ್ಲಿ, ಪುನರ್ಪುಳಿ, ನೇರಳೆ ಗಿಡಗಳನ್ನು ನೆಡಲಾಗಿದೆ. ಸುಮಾರು ಎರಡೂವರೆ ಸಾವಿರ ಗಿಡಗಳು ಇದ್ದು, ಮಕ್ಕಳಲ್ಲಿ ಇಂಗು ಗುಂಡಿಯ ಜಾಗೃತಿ ಮೂಡಿಸಿದ ಕಾರಣ ಕೇಪು ಗ್ರಾಮದ ಎಲ್ಲ ಮನೆಗಳಲ್ಲಿ ಇಂಗು ಗುಂಡಿ ನಿರ್ಮಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಮನೆಯಲ್ಲಿ ಇಂಗು ಗುಂಡಿ ನಿರ್ಮಿಸಿದ ಬಗ್ಗೆ ತಮ್ಮ ಮನೆಯವರ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್ ಮೂಲಕ ಫೋಟೋ ತೆಗೆದು ಮುಖ್ಯಗುರುಗಳ ಹಾಗೂ ಇಕೋ ಕ್ಲಬ್ ಮುಖ್ಯಸ್ಥರ ಮೊಬೈಲ್‌ಗೆ ರವಾನಿಸುತ್ತಾರೆ. ಈಗಾಗಲೇ 100ಕ್ಕೂ ಅಧಿಕ ಇಂಗು ಗುಂಡಿಗಳು ನಿರ್ಮಾಣಗೊಂಡಿದೆ ಎಂದು ಹೇಳಿದರು.

 ಪೆರುವಾಯಿ ಗ್ರಾಮದ ಶಿಕ್ಷಕರೊಬ್ಬರ ಮನೆಯ ತೋಟಗಳಲ್ಲಿ ಇಂಗು ಗುಂಡಿ ನಿರ್ಮಿಸಿರುವುದನ್ನು ಸಾಕ್ಷಚಿತ್ರದ ಮೂಲಕ ತೋರಿಸಲಾಯಿತು. ಪದ್ಯಾಣ ಶಾಲೆಯಲ್ಲಿ 10 ಸಾವಿರ ವೆಚ್ಚದಲ್ಲಿ ಇಂಗು ಗುಂಡಿ ರಚಿಸಲಾಗಿದೆ. ಅಲ್ಲದೆ ಶಾಲೆಯ ಮಾಡಿನಿಂದ ಪೈಪಿನ ಮೂಲಕ ಮಳೆ ನೀರನ್ನು ಶೇಖರಿಸಿ ಇಂಗಿಸುವ ಕಾರ್ಯವನ್ನೂ ಸಿದ್ಧಪಡಿಸಲಾಗಿದೆ. ಇಂಗಿಸಿದ ನೀರನ್ನು ಅಡ್ಯನಡ್ಕದ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.

ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ದಿನೇಶ್, ವಿವಿಧ ಶಾಲೆಗಳ ಮುಖ್ಯಸ್ಥರು ತಮ್ಮಲ್ಲಿನ ಇಂಗು ಗುಂಡಿಯ ಸಾಧನೆಯನ್ನು ಮುಂದಿಟ್ಟರು. ಇದೇ ಸಂದರ್ಭದಲ್ಲಿ ಸಾಮೂಹಿಕ ಜಲ ಮರು ಪೂರಣದ ಅನಿವಾರ್ಯತೆ, ಕೋಟಿ ವೃಕ್ಷ ಆಂದೋಲನದ ಅವಶ್ಯಕತೆಯನ್ನು ತಿಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News