ಆಟೊರಿಕ್ಷಾಗೆ ಢಿಕ್ಕಿ ಹೊಡೆದ ಟಿಪ್ಪರ್: ಐವರು ಮೃತ್ಯು
ಕಾಸರಗೋಡು, ಸೆ.16: ಆಟೊ ರಿಕ್ಷಾ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೊ ಚಾಲಕ ಸೇರಿದಂತೆ ಐದು ಮಂದಿ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಪಯ್ಯನ್ನೂರು ಕುನ್ನೂರುರಾವಿಯಲ್ಲಿ ನಡೆದಿದೆ.
ಆಟೊರಿಕ್ಷಾಗೆ ಢಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಮತ್ತೆ ಅಲ್ಲೇ ಮೀನು ಮಾರಾಟ ಮಾಡುತ್ತಿದ್ದ ಗೂಡ್ಸ್ ಆಟೊಗೆ ಡಿಕ್ಕಿ ಹೊಡೆದಿದೆ.
ಮೃತಪಟ್ಟವರನ್ನು ರಾಮಂತಳಿಯ ಗಣೇಶ್ (38), ಅವರ ಪತ್ನಿ ಲಲಿತಾ (32), ಪುತ್ರಿ ಲಿಸ್ನಾ (5), ಆರಾಧ್ಯ (4) ಮತ್ತು ದೇವಕಿ (72) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಲಿಸ್ನಾ ರಾತ್ರಿ 9:30 ರ ವೇಳೆಗೆ ಮೃತಪಟ್ಟಿದ್ದಾಳೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತಪಟ್ಟವರಲ್ಲಿ ನಾಲ್ವರು ಮಂದಿ ಆಟೊ ಪ್ರಯಾಣಿಕರಾಗಿದ್ದು, ದೇವಕಿ ಮೀನು ಖರೀದಿಸಲು ಅಲ್ಲಿಗೆ ತೆರಳಿದ್ದರು. ಗಾಯಗೊಂಡವರನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಟಿಪ್ಪರ್ ಲಾರಿ ಚಾಲಕ ಪಾನಮತ್ತನಾಗಿದ್ದು, ಅಪಘಾತ ಸಂಭವಿಸಿದ ಕೂಡಲೇ ಈತ ಪರಾರಿಯಾಗಿದ್ದಾನೆ. ಟಿಪ್ಪರ್‌ನ ಅತೀ ವೇಗವೇ ಪಘಾತಕ್ಕೆ ಕಾರಣವೆನ್ನಲಾಗಿದೆ.