×
Ad

ಮೆಟ್ಟೂರು ಜಲಾಶಯದಿಂದ ನೀರು: ಜಯಲಲಿತಾ ಆದೇಶ

Update: 2016-09-16 23:58 IST

ಚೆನ್ನೈ, ಸೆ.16: ಕರ್ನಾಟಕ ಸರಕಾರ ಕಾವೇರಿ ನದಿಯಿಂದ ನೀರು ಹರಿಯ ಬಿಟ್ಟಿರುವ ಕಾರಣ ಮೆಟ್ಟೂರು ಜಲಾಶಯ ದಲ್ಲಿ ನೀರಿನ ಸಂಗ್ರಹ ಹೆಚ್ಚಿರುವ ಹಿನ್ನೆಲೆಯಲ್ಲಿ ನದೀಮುಖಜ ಭೂಮಿಯ ಜಿಲ್ಲೆಗಳಲ್ಲಿರುವ ಸಾಂಬಾ ಬೆಳೆಗಳಿಗೆ ನೀರು ಬಿಡುವಂತೆ ತಮಿಳುನಾಡು ಸಿಎಂ ಜಯಲಲಿತಾ ಆದೇಶಿಸಿದ್ದಾರೆ.

ರೈತರ ಸಾಂಬಾ ಕೃಷಿಗೆ ಅನುಕೂಲವಾಗುವ ದೃಷ್ಟಿಯಿಂದ ಸೆ.20ರಿಂದ ಮೆಟ್ಟೂರು ಜಲಾಶಯದಿಂದ ನೀರು ಬಿಡುವಂತೆ ಆದೇಶಿಸಿರುವುದಾಗಿ ಅವರು ತಿಳಿಸಿದ್ದಾರೆ.

     ಜಲಾಶಯದಲ್ಲಿ ನೀರಿನ ಮಟ್ಟ 84.76 ಅಡಿಗಳಿಗೆ (ಸಾಮರ್ಥ್ಯ 120 ಅಡಿ) ತಲುಪಿರುವುದು, ಸುಪ್ರೀಂಕೋರ್ಟ್‌ನ ಆದೇಶದ ಬಳಿಕ ಕರ್ನಾಟಕದಿಂದ ಹೆಚ್ಚು ನೀರು ಲಭ್ಯವಾಗುವ ನಿರೀಕ್ಷೆ, ತಮಿಳುನಾಡಿಗೆ ಸಲ್ಲಬೇಕಿರುವ ನೀರಿನ ಪ್ರಮಾಣದ ಬಗ್ಗೆ ಕಾವೇರಿ ಉಸ್ತುವಾರಿ ಸಮಿತಿ ತಳೆಯಲಿರುವ ನಿರ್ಧಾರ ಮತ್ತು ಉತ್ತಮ ಈಶಾನ್ಯ ಮಾನ್ಸೂನ್ ಮಳೆಯ ಸಾಧ್ಯತೆ- ಈ ಅಂಶಗಳ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಈ ಆದೇಶ ನೀಡಿದೆ.

  ಕೋರ್ಟ್ ಆದೇಶದ ಬಳಿಕ ಕರ್ನಾಟಕದಿಂದ ತಮಿಳುನಾಡಿನ ಬಿಳಿಗುಂಡುಲು ಕೇಂದ್ರಕ್ಕೆ ಸೆ.14 ರವರೆಗೆ 8.92 ಟಿಎಂಸಿ ನೀರು ಹರಿದು ಬಂದಿದೆ ಎಂದು ಜಯಲಲಿತಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾವೇರಿ ವಿವಾದ ನ್ಯಾಯಪೀಠವು 2007ರಲ್ಲಿ ನೀಡಿದ ಅಂತಿಮ ತೀರ್ಪನ್ನು 2013ರ ರಾಜ್ಯಪತ್ರ (ಗಝೆಟ್) ನಲ್ಲಿ ಪ್ರಕಟಿಸಲಾಗಿದೆ . ಆದರೆ ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿಲ್ಲ ಎಂದು ಜಯಲಲಿತಾ ಆರೋಪಿಸಿದ್ದಾರೆ.ಇದರಿಂದ ಕಾವೇರಿಯಿಂದ ನಮಗೆ ಸಿಗಬೇಕಾದ ನೀರಿಗಾಗಿ ಸುಪ್ರೀಂ ಕೋರ್ಟ್ ಮೊರೆಹೋಗಲು ನಮಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

 ಈ ಮೊದಲು, ಕರ್ನಾಟಕ ಸರಕಾರಕ್ಕೆ 50 ಟಿಎಂಸಿ ನೀರು ಬಿಡುವಂತೆ ನಿರ್ದೇಶಿಸಬೇಕೆಂದು ಕೋರಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಆರಂಭದಲ್ಲಿ 10 ದಿನ 15,000 ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಿದ್ದ ಸುಪ್ರೀಂಕೋರ್ಟ್, ಬಳಿಕ ತನ್ನ ಆದೇಶದಲ್ಲಿ ಮಾರ್ಪಾಟು ಮಾಡಿ ಸೆ.20ರವರೆಗೆ 12,000 ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿತ್ತು. ಕರ್ನಾಟಕ ಕಾವೇರಿ ನೀರು ಬಿಡುವ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೇಂದ್ರ ಸರಕಾರಕ್ಕೆ ಮಾಡಿ ಕೊಂಡಿದ್ದ ಮನವಿ ಯಾವುದೇ ಫಲಿತಾಂಶ ನೀಡದ ಬಳಿಕ ಕೋರ್ಟ್‌ನ ಮೊರೆಹೋಗಬೇಕಾಯಿತು ಎಂದು ಜಯಲಲಿತಾ ತಿಳಿಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ದೊರಕದ ಕಾರಣ ನದೀಮುಖಜ ಭೂಮಿಯ ರೈತರ ಸಾಂಬಾ ಕೃಷಿಗೆ ಅನುಕೂಲವಾಗಲೆಂದು ಜಯಲಲಿತಾ 64.30 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News