ವ್ಯಾಪಾರ ಪರವಾನಿಗೆ ನವೀಕರಿಸದ ಅಂಗಡಿಗಳಿಗೆ ಮನಪಾ ದಾಳಿ
ಮಂಗಳೂರು, ಸೆ.17: ವ್ಯಾಪಾರ ಪರವಾನಿಗೆ ನವೀಕರಿಸಿದ ಅಂಗಡಿಗಳಿಗೆ ಮನಪಾದಿಂದ ಶನಿವಾರ ಬೆಳಗ್ಗೆ ದಾಳಿ ನಡೆಯಿತು. ಮನಪಾ ಕಾರ್ಯಾಚರಣೆಯನ್ನು ಗಮನಿಸಿದ ಪರವಾನಿಗೆ ನವೀಕರಿಸದ ಹಲವು ಅಂಗಡಿಗಳ ಮಾಲಕರು ತಮ್ಮ ಅಂಗಡಿಗಳನ್ನು ಮುಚ್ಚಿ ಸ್ಥಳದಿಂದ ಕಾಲ್ಕಿತ್ತ ಘಟನೆಯೂ ನಡೆಯಿತು.
ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್ ನೇತೃತ್ವದಲ್ಲಿ ಇಂದು ನಗರದ ಹಂಪನಕಟ್ಟೆಯಲ್ಲಿನ ವ್ಯಾಪಾರ ಪರವಾನಿಗೆ ನವೀಕರಿಸದ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಪರವಾನಿಗೆ ನವೀಕರಿಸದೆ ಇದ್ದಅಂಗಡಿಗಳಿಗೆ ಬೀಗ ಜಡಿದು ನೋಟಿಸ್ ನೀಡಲಾಯಿತು. ಈ ಕಾರ್ಯಾಚರಣೆಯನ್ನು ದೂರದಿಂದಲೇ ಗಮನಿಸಿದ ಹಲವು ವ್ಯಾಪಾರಿಗಳು ದಾಳಿ ನಡೆಸುವ ಮುನ್ನವೇ ಅಂಗಡಿಗಳನ್ನು ಬಂದು ಮಾಡಿ ಸ್ಥಳದಿಂದ ಪರಾರಿಯಾದರು. ವ್ಯಾಪಾರಿಗಳ ಕಳ್ಳ ನಡೆಯನ್ನು ಮನಗಂಡ ಮನಪಾ ತಂಡ ಅಂತಹ ಅಂಗಡಿಗಳಿಗೆ ಬೀಗ ಮುದ್ರೆ ಜಡಿದರು. ಈ ಸಂದರ್ಭ ಮಾತನಾಡಿದ ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್, ವ್ಯಾಪಾರ ಪರವಾನಿಗೆ ನವೀಕರಣ ಮಾಡದೆ ಇರುವ ಅಂಗಡಿಗಳಿಗೆ ದಾಳಿ ಪ್ರಕ್ರಿಯೆ ಕಳೆದ ಹಲವು ಸಮಯಗಳಿಂದ ಆಗುತ್ತಿದೆ. ಆದರೂ ವ್ಯಾಪಾರ ಪರವಾನಿಗೆ ನವೀಕರಿಸದ ಅಂಗಡಗಳ ಮಾಲಕರೂ ಇನ್ನೂ ನವೀಕರಿಸಲು ಮುಂದಾಗಿಲ್ಲ. ಇಂದಿನ ಕಾರ್ಯಾಚರಣೆಯ ಸಂದರ್ಭ ವ್ಯಾಪಾರ ಪರವಾನಿಗೆ ನವೀಕರಿಸದ ಕೆಲವರು ತಮ್ಮ ಅಂಗಡಿಗಳನ್ನು ಮುಚ್ಚಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಪರವಾನಿಗೆ ನವೀಕರಿಸದ ಅಂಗಡಿಯವರು ಅಲ್ಲಿ ಇರದಿದ್ದರೂ ಅಂತಹ ಅಂಗಡಿಗಳಗೆ ಬೀಗ ಮುದ್ರೆ ಜಡಿಯಲಾಗುವುದು ಎಂದು ತಿಳಿಸಿದರು.
ಹೋಟೆಲ್‌ಗಳಿಗೂ ಬೀಗ
ಇದೇ ವೇಳೆ ಶುಚಿತ್ವವನ್ನು ಕಾಪಾಡದ ಕೆಲವು ಹೋಟೆಲ್‌ಗಳಿಗೂ ಬೀಗ ಜಡಿಯಲಾಯಿತು.
ಈ ಕಾರ್ಯಾಚರಣೆಯಲ್ಲಿ ಮನಪಾ ಸದಸ್ಯ ನಾಗವೇಣಿ, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪಡಿತರ ಇಂಜಿನಿಯರ್ ಮಧು, ಮನು ಕುಮಾರ್ ಶಬರಿನಾಥ್, ಆರೋಗ್ಯ ನಿರೀಕ್ಷಕ ಯಶವಂತ್ ಕರುಣಾಕರ್, ಭರತ್, ಪೂವಪ್ಪ, ಪ್ರಶಾಂತ್ ಪಾಲ್ಗೊಂಡಿದ್ದರು.