ಅಕ್ರಮ ಸಂಪರ್ಕದ ನೀರಿನ ನಳ್ಳಿ ಪತ್ತೆಗೆ ಪುತ್ತೂರು ನಗರಸಭೆ ನಿರ್ಧಾರ
ನೀರು ಸರಬರಾಜು ಕುರಿತು ಸಭೆ
ಪುತ್ತೂರು, ಸೆ.27: ನಗರಸಭಾ ವ್ಯಾಪ್ತಿಯಲ್ಲಿನ ವಾರದ 24 ಗಂಟೆ ನೀರು ಸರಬರಾಜಿನಲ್ಲಿ ನಗರಸಭೆಗೆ ದೊರೆಯುವ ಆದಾಯಕ್ಕಿಂತ ಖರ್ಚು ಅಧಿಕವಾಗಿದೆ. ಈ ಹಿನ್ನ್ನೆಲೆಯಲ್ಲಿ ಅಕ್ರಮ ನಳ್ಳಿ ಸಂಪರ್ಕ ಸೇರಿದಂತೆ ನೀರು ಬಳಕೆಯ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹಿಸಲು ತಳಮಟ್ಟದಿಂದ ಸಮೀಕ್ಷೆ ಕಾರ್ಯ ನಡೆಸುವ ಬಗ್ಗೆ ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿಂದು ನಗರಸಭೆಯಲ್ಲಿ ಸಭೆೆ ನಡೆದು ಚರ್ಚಿಸಲಾಯಿತು.
ನೀರು ಸರಬರಾಜಿಗೆ ಸಂಬಂಧಪಟ್ಟಂತೆ ನಗರಸಭೆಗೆ 3.5 ಕೋ.ರೂ. ವಾರ್ಷಿಕ ವೆಚ್ಚವಾಗುತ್ತಿದೆ. ಅದರಲ್ಲಿ ನಗರಸಭೆಗೆ ಸಿಗುವ ಆದಾಯ ರೂ. 2 ಕೋಟಿ ಮಾತ್ರ. ಅದರಲ್ಲೂ ರೂ. 1 ಕೋಟಿ ವಿದ್ಯುತ್ ಬಿಲ್ ಪಾವತಿಸಲಾಗುತ್ತದೆ. ಹಾಗಾಗಿ ರೂ.2 ಕೋಟಿ ನಗರಸಭೆಗೆ ಹೊರೆಯಾಗುತ್ತಿದ್ದು, ಇದನ್ನು ಸರಿದೂಗಿಸುವ ಕುರಿತಂತೆ ಚರ್ಚೆ ನಡೆಯಿತು.
ಜಿಕೆಡಬ್ಲು ಕಂಪೆನಿಯ ಕನ್ಸಲೆಂಟ್ ಎಂಜಿನಿಯರ್ ಪ್ರವೀಣ್ ಮಾತನಾಡಿ, ನೆಕ್ಕಿಲಾಡಿಯಿಂದ ಪುತ್ತೂರು ಪಟ್ಟಣಕ್ಕೆ ಬರುವ 1 ಲೀ. ನೀರಿನಲ್ಲಿ 30 ಶೇ. ನೀರು ಸೋರಿಕೆ ಆಗುತ್ತದೆ. ಎಲ್ಲ ನೀರಿನ ಮೂಲಗಳನ್ನು ಸೇರಿಸಿದರೆ ಸೋರಿಕೆ ಆಗುವ ಪ್ರಮಾಣ ಶೇ.50ರಷ್ಟು ಇರಬಹುದು. ಹಾಗಾಗಿ ಸೋರಿಕೆ ಎಲ್ಲಿ ಆಗುತ್ತಿದೆ ಎನ್ನುವ ಬಗ್ಗೆ ಸರ್ವೇ ಕಾರ್ಯ ನಡೆದರೆ ಪರಿಹಾರ ಕಂಡುಕೊಳ್ಳಬಹುದು ಎಂದು ಸೂಚಿಸಿದರು.
ಸದಸ್ಯ ಮುಹಮ್ಮದ್ ಅಲಿ ಮಾತನಾಡಿ, ಅಕ್ರಮ ನಳ್ಳಿ ಸಂಪರ್ಕ ಮತ್ತು ಸೋರಿಕೆ ತಡೆಗಟ್ಟುವ ಬಗ್ಗೆ ಆಯಾ ವಾರ್ಡ್‌ನ ಸದಸ್ಯರ ನೇತೃತ್ವದಲ್ಲಿ ಕ್ರಮ ಆಗಬೇಕಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಅದನ್ನು ನಗರಸಭೆ ಭರಿಸುವುದು ಕಷ್ಟ. ಈ ನಿಟ್ಟಿನಲ್ಲಿ ಸರ್ವೇ ಕಾರ್ಯವನ್ನು ಯಾವ ರೀತಿ ನಡೆಸಬಹುದು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಸದಸ್ಯ ಬಾಲಚಂದ್ರ ಮಾತನಾಡಿ, ಈಗಾಗಲೇ ಎರಡನೆ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ಬಗ್ಗೆ ಪೂರ್ವಭಾವಿ ಸಭೆ ಆಗಿದೆ. ಪ್ರತಿ ಯೋಜನೆಗೂ ಕೋಟಿ ಹಣ ಖರ್ಚು ಮಾಡುವ ಬದಲು, ಭವಿಷ್ಯದ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಹೇಗೆ ಜಾರಿ ಮಾಡಬಹುದು ಎನ್ನುವ ಪ್ರಾಥಮಿಕ ಮಾಹಿತಿ ಸಂಗ್ರಹ ನಡೆಸಬೇಕು ಎಂದು ಸಲಹೆ ನೀಡಿದರು.
ಖರ್ಚು ಸರಿದೂಗಿಸುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ಸರ್ವೇ ಕಾರ್ಯ ನಡೆಸುವುದು, ಅಕ್ರಮ ಸಂಪರ್ಕದಾರರಿಗೆ ನೋಟಿಸ್ ನೀಡುವುದು, ನೀರು ಬಳಕೆ ಮಾಡುವ ಪ್ರತಿ ಮನೆಯ ಪೂರ್ಣ ಮಾಹಿತಿ ಸಂಗ್ರಹಿಸುವುದು, ಬಹುಮಡಿಯ ಕಟ್ಟಡಗಳಲ್ಲಿ ನೀರಿನ ಸಂಪರ್ಕ ಬಳಕೆ ಬಗ್ಗೆ ಪರಿಶೀಲನೆ, ಸಾರ್ವಜನಿಕ ನಳ್ಳಿ ನೀರಿನ ಸಂಪರ್ಕ ಕಡಿತ ಮೊದಲಾದ ಕ್ರಮ ಕೈಗೊಳ್ಳುವ ಕುರಿತು ಸಭೆೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ ಭಂಡಾರಿ, ಪೌರಾಯುಕ್ತೆ ರೂಪಾ ಶೆಟ್ಟಿ, ಕೆಯುಐಡಿಎಫ್‌ಸಿ ಉಪನಿರ್ದೇಶಕ ಪ್ರಭಾಕರ ಶರ್ಮ ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.