ಸಮುದಾಯ ಸಂಘಟಿತವಾದಾಗ ಅಭಿವೃದ್ಧಿ: ಸಚಿವ ರೈ
ಮಂಗಳೂರು, ಸೆ.17: ಯಾವುದೇ ಒಂದು ಸಮುದಾಯ ಸಂಘಟಿತವಾದಾಗ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸಲು ಅವಕಾಶ ಕಲ್ಪಿಸಿರುವುದು ಸಮುದಾಯಕ್ಕೆ ದೊರೆತ ಸ್ವಾಭಿಮಾನದ ಸಂಕೇತ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದರು.
ನಗರದ ಪುರಭವನದಲ್ಲಿ ಇಂದು ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಪ್ರಥಮ ಸರಕಾರಿ ಮಟ್ಟದಲ್ಲಿ ಆಯೋಜಿಸಲಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮದವರು ಅನುವಂಶೀಯವಾಗಿ ನಾಜೂಕಿನ ವೃತ್ತಿಗಳ ಮೂಲಕ ಗುರುತಿಸಿಕೊಂಡವರು. ದೇವಸ್ಥಾನ ನಿರ್ಮಾಣ, ಚಿನ್ನಾಭರಣ, ಕಲಾವಿದರಾಗಿ, ಚಿತ್ರ ಬರಹಗಾರರಾಗಿ ವೃತ್ತಿಯನ್ನು ನಿರ್ವಹಿಸಿದವರು. ಸಮಾಜದಲ್ಲಿ ಉದ್ಯೋಗದ ಮೂಲಕ ಜಾತಿಗಳು ಸೃಷ್ಟಿಯಾಗಿವೆ.ಸಮುದಾಯಗಳೊಳಗೆ ಉದ್ಯೋಗದ ಕಾರಣಕ್ಕೆ ಸಾಕಷ್ಟು ಬದಲಾವಣೆಗಳಿಗೂ ಕಾರಣವಾಗಿವೆ ಎಂದವರು ವ್ಯಾಖ್ಯಾನಿಸಿದರು.
ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದ ವಿಶ್ವಕರ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಮೂಲಕ ಸರಕಾರ ಸಮುದಾಯಕ್ಕೆ ಸ್ವಾಭಿಮಾನವನ್ನು ಒದಗಿಸಿದೆ. ಈ ಮೂಲಕ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ಅನುಕೂಲವಾಗಿದೆ. ವಿಶ್ವಕರ್ಮ ನಿಗಮವನ್ನೂ ಸ್ಥಾಪಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಮುದಾಯದ ಇನ್ನಷ್ಟು ಅಭಿವೃದ್ಧಿಗೆ ಪೂಕವಾಗಲಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿದರು.
ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಹರಿನಾಥ್, ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ, ಅವಿಭಜಿತ ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ, ವಿಶ್ವಕರ್ಮ ನಿಗಮದ ಜಿಲ್ಲಾ ಅಧಿಕಾರೇತರ ಸದಸ್ಯ ಮಧುಸೂದನ ಆಚಾರ್ಯ, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿ ಮೊದಲಾದರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಡಾ. ಅಂಬೇಡ್ಕರ್ ವೃತ್ತ (ಜ್ಯೋತಿ)ದಿಂದ ಪುರಭವನದವರೆಗೆ ವಿಶ್ವಕರ್ಮರ ಪ್ರತಿಮೆಯೊಂದಿಗೆ ಬೈಕ್ ಹಾಕೂ ಕಾರುಗಳೊಂದಿಗೆ ವಿಶ್ವಕರ್ಮ ಯುವ ವೇದಿಕೆ ನೇೃತ್ವದಲ್ಲಿ ಮೆರವಣಿಗೆ ನಡೆಯಿತು.
ಮೂಡಬಿದ್ರೆ, ಎಸ್.ಎಂ. ಪಾಲಿಟೆಕ್ನಿಕ್ ಉಪನ್ಯಾಸಕ ಡಾ.ಎಸ್.ಪಿ. ಗುರುದಾಸ್ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.