ಮೂಡುಬಿದಿರೆ : ಅಂತರಾಷ್ಟ್ರೀಯ "ಅಕ್ಷರ ಜ್ಷಾನ" ದಿನಾಚರಣೆ"
ಮೂಡುಬಿದಿರೆ,ಸೆ.17 : ಪ್ರಾಥಮಿಕ ಶಿಕ್ಷಣವನ್ನು ನೀಡುವ ಶಿಕ್ಷಕರಿಗೆ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಜವಾಬ್ದಾರಿಯಿದೆ. ಶಿಕ್ಷಣವನ್ನು ಕೇವಲ ಪರೀಕ್ಷೆ ಅಥವಾ ರ್ಯಾಂಕ್‌ಗೆ ಮಾತ್ರ ಸೀಮಿತಗೊಳಿಸದೆ ಬದುಕಿನ ಶಿಕ್ಷಣವನ್ನು ನೀಡುವ ಅನಿವಾರ್ಯತೆಯಿದೆ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನ್ ಹೇಳಿದರು.
ಅವರು ಮೂಡುಬಿದಿರೆಯ ಇನ್ನರ್‌ವೀಲ್ ಕ್ಲಬ್ ವತಿಯಿಂದ ರೋಟರಿ ಸಮ್ಮಿಲನ್ ಹಾಲ್‌ನಲ್ಲಿ ಆಚರಿಸಿದ ಅಂತರಾಷ್ಟ್ರೀಯ "ಅಕ್ಷರ ಜ್ಞಾನ" ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ನಾವು ಪಡೆಯುವ ಪ್ರಾಥಮಿಕ ಶಿಕ್ಷಣವು ಜೀವನದಲ್ಲಿ ಭದ್ರ ಬುನಾದಿಯಾಗಿರುತ್ತದೆ. ಶಿಕ್ಷಕರಲ್ಲಿ ಭಾಷಾ ಜ್ಞಾನವಿರಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿಸಬೇಕು, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು ಹಾಗೂ ಪ್ರೊಫೆಸನಲ್ ಶಿಕ್ಷಕರಾಗಿರಬೇಕು ಎಂದು ಹೇಳಿದ ಅವರು ಶಿಕ್ಷಕರು ಉತ್ತಮ ಓದುಗರು ಮತ್ತು ಕೇಳುಗರಾಗಿರಬೇಕೆಂದು ಸಲಹೆ ನೀಡಿದರು.
ಪ್ರಭಾರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ/ಕೃಷ್ಣ ಮೋಹನ್ ಪ್ರಭು "ಪ್ರಥಮ ಚಿಕಿತ್ಸೆ" ಹಾಗೂ ಡಾ/ಎಸ್.ಪಿ.ವಿದ್ಯಾಕುಮಾರ್ "ಸಾಕ್ಷರತೆ"ಯ ಬಗ್ಗೆ ಮಾಹಿತಿ ನೀಡಿದರು.
ಪ್ರಶಸ್ತಿ : ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ, ಮಾಸ್ತಿಕಟ್ಟೆ ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲ, ಮೂಡುಬಿದಿರೆ ಮೈನ್ ಶಾಲೆಯ ಜೆಸಿಂತಾ, ಮೂಡು ಮಾರ್ನಾಡು ಶಾಲೆಯ ಸುಮಿತಾ ಮೂಡುಬಿದಿರೆ ಗಾಂಧಿ ನಗರ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಾಂತಿ ಮತ್ತು ಪ್ರೇಮಾ ಅವರಿಗೆ "ರಾಷ್ಟ್ರ ನಿರ್ಮಾಣ ಅವಾರ್ಡ್" ನೀಡಿ ಗೌರವಿಸಲಾಯಿತು.
ಇನ್ನರ್‌ವೀಲ್ ಕ್ಲಬ್‌ನ ಶಾಲಿನಿ ಹರೀಶ್ ನಾಯಕ್, ಬೀಪಾ ಶರೀಫ್, ಸಹನಾ ನಾಗರಾಜ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸೀಮಾ ಸುದೀಪ್ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಯಾಸ್ಮಿನ್ ವಂದಿಸಿದರು.