ಐತ್ತೂರು ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಯವರ ಸದಸ್ಯತ್ವ ರದ್ದು
ಕಡಬ, ಸೆ.17. ಇಲ್ಲಿನ ಐತ್ತೂರು ಗ್ರಾಮ ಪಂಚಾಯತ್‌ನಲ್ಲಿ 2011ನಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರದ ವಿರುದ್ಧ ಗ್ರಾಮಸ್ಥರಾದ ಕೆ.ಪಿ. ಮೋಹನ್ ಎಂಬವರು ನೀಡಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಲಯವು ತನಿಖೆ ನಡೆಸಿ ಅಂದಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಹಾಲಿ ಅಧ್ಯಕ್ಷ ಸತೀಶ್ ಕೆ.ಯವರ ಪಂಚಾಯತ್ ಸದಸ್ಯತನವನ್ನು ರದ್ದುಗೊಳಿಸಿ ಆದೇಶಿಸಿದೆ.
2011ರಲ್ಲಿ ಐತ್ತೂರು ಗ್ರಾಮಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 20 ಫಲಾನುಭವಿಗಳಿಗೆ ಸಿಂಟೆಕ್ಸ್ ನೀರಿನ ಟ್ಯಾಂಕ್ ವಿತರಿಸಲು ಅನುಮೋದನೆ ಪಡೆಯಲಾಗಿತ್ತು. ಆದರೆ ನೀರಿನ ಟ್ಯಾಂಕ್ ವಿತರಿಸುವಲ್ಲಿ ಕೆಲವು ನ್ಯೂನತೆಗಳಾಗಿದ್ದು, ಸುಮಾರು 50,730 ರೂ.ಗಳಷ್ಟು ಅವ್ಯವಹಾರ ನಡೆದಿದೆಯೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಸತೀಶ್ ಕೆ. ಹಾಗೂ ಐತ್ತೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಹೇಳಿಕೆಗಳನ್ನು ತುಲನೆ ಮಾಡಿದಾಗ ಸತೀಶ್ ರವರು ತನ್ನ ಅಧ್ಯಕ್ಷ ಪದವಿಯನ್ನು ದುರುಪಯೋಗಪಡಿಸಿಕೊಂಡು ತನಿಖಾ ವರದಿಯನ್ನು ಬುಡಮೇಲು ಮಾಡುವ ಪ್ರಯತ್ನದಂತೆ ಕಾಣುತ್ತಿದೆ ಹಾಗೂ ವಿಚಾರಣೆ ಆರಂಭವಾದ ನಂತರ ಕಡತಗಳನ್ನು ಸೃಷ್ಟಿ ಮಾಡಿರುವುದು ಕಂಡು ಬಂದಿರುವುದರಿಂದ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದಡಿ ಕ್ರಮಕೈಗೊಳ್ಳಲು ಉಪಲೋಕಾಯುಕ್ತರು ಕೋರಿದ್ದರು. ಈ ಹಿನ್ನೆಲೆಯಲ್ಲಿ ಹಾಲಿ ಪಂಚಾಯತ್ ಅಧ್ಯಕ್ಷರಾಗಿರುವ ಸತೀಶ್ ಕೆ.ಯವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಐತ್ತೂರು ಗ್ರಾಮ ಪಂಚಾಯತಿನ ಸದಸ್ಯತ್ವ ಸ್ಥಾನದಿಂದ ರದ್ದುಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ವಿ. ಅರುಣ್ ಕುಮಾರ್ ರವರು ಆದೇಶಿಸಿದ್ದಾರೆ.
ಆದೇಶ ಪ್ರತಿ ನನ್ನ ಕೈ ಸೇರಿಲ್ಲ: ಸತೀಶ್ ಕೆ.
ಸದಸ್ಯತ್ವ ರದ್ದತಯ ಬಗ್ಗೆ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಯವರನ್ನು ಮಾತನಾಡಿಸಿದಾಗ, ಸದಸ್ಯತ್ವ ರದ್ದತಿ ಬಗ್ಗೆ ಆದೇಶ ಪ್ರತಿ ಇನ್ನೂ ನನ್ನ ಕೈ ಸೇರಿಲ್ಲ. ಆದೇಶ ಪ್ರತಿ ಕೈ ಸೇರಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದರು.