ಕೃತಿಸ್ವಾಮ್ಯ ದೈವಿಕ ಹಕ್ಕಲ್ಲ: ದಿಲ್ಲಿ ಹೈಕೋರ್ಟ್

Update: 2016-09-17 13:51 GMT

ಹೊಸದಿಲ್ಲಿ,ಸೆ.17: ಕೃತಿಸ್ವಾಮ್ಯದೈವಿಕ ಹಕ್ಕು ಅಲ್ಲ ಎಂದು ಶುಕ್ರವಾರ ಮಹತ್ವದ ತೀರ್ಪೊಂದರಲ್ಲಿ ಎತ್ತಿ ಹಿಡಿದ ದಿಲ್ಲಿ ಉಚ್ಚ ನ್ಯಾಯಾಲಯವು, ಪ್ರಮುಖ ಪ್ರಕಾಶಕರು ಪ್ರಕಟಿಸಿರುವ ಪ್ರಮುಖ ಪಠ್ಯಪುಸ್ತಕಗಳ ಛಾಯಾಪ್ರತಿಗಳನ್ನು ವಿತರಿಸಲು ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ಅವಕಾಶವನ್ನು ಕಲ್ಪಿಸಿತು.

ದಿಲ್ಲಿ ವಿವಿಯ ಗ್ರಂಥಾಲಯದಿಂದ ಅಥವಾ ಅದರ ಅಧಿಕೃತ ಝೆರಾಕ್ಸ್ ಮಳಿಗೆಯಿಂದ ಪುಸ್ತಕಗಳ ನಕಲು ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಕೃತಿಸ್ವಾಮ್ಯ ಉಲ್ಲಂಘನೆಯಿಂದ ಶಿಕ್ಷಣಕ್ಕೆ ವಿನಾಯಿತಿ ನೀಡಿರುವ ಕೃತಿಸ್ವಾಮ್ಯ ಕಾಯ್ದೆಯ ಕಲಂ 52ರಡಿ ರಕ್ಷಣೆಯಿದೆ ಎಂದು ನ್ಯಾಯಾಧಿಶರು ಸ್ಪಷ್ಟಪಡಿಸಿದರು.

 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ದಿಲ್ಲಿ ವಿವಿಯು ತನ್ನ ಗ್ರಂಥಾಲಯದಲ್ಲಿ ಪುಸ್ತಕಗಳ ಝೆರಾಕ್ಸ್ ಪ್ರತಿಯನ್ನು ತೆಗೆಯಬಹುದಾದರೆ ಇದೇ ರಕ್ಷಣೆ ಅಧಿಕೃತ ಝೆರಾಕ್ಸ್ ಮಳಿಗೆಯ ಗುತ್ತಿಗೆದಾರರಿಗೂ ದೊರೆಯುತ್ತದೆ ಎಂದು ಪೀಠವು ತನ್ನ 94 ಪುಟಗಳ ತೀರ್ಪಿನಲ್ಲಿ ಹೇಳಿದೆ.

ವಿವಿ ಕ್ಯಾಂಪಸ್‌ನಲ್ಲಿರುವ ರಾಮೇಶ್ವರಿ ಫೋಟೊಕಾಪಿ ಸರ್ವಿಸ್ ದಿಲ್ಲಿ ವಿವಿಯು ಅಂಗೀಕರಿಸಿರುವ ಪಠ್ಯಪುಸ್ತಕಗಳಲ್ಲಿಯ ವಿಷಯಗಳ ಝೆರಾಕ್ಸ್ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಕಾಪಿರೈಟ್ ಕಾಯ್ದೆಯನ್ನು ಉಲ್ಲಂಘಿಸಿದೆಯೆಂದು ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್,ಕ್ಯಾಂಬ್ರಿಜ್ ಯುನಿವರ್ಸಿಟಿ ಪ್ರೆಸ್ ಮತ್ತು ಟೇಲರ್ ಆ್ಯಂಡ್ ಫ್ರಾನ್ಸಿಸ್ ಸೇರಿದಂತೆ ಪ್ರಕಾಶಕರ ಗುಂಪೊಂದು 2012ರಲ್ಲಿ ಅದರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿತ್ತು.

ದಿಲ್ಲಿ ವಿವಿಯು ಶಿಕ್ಷಣವನ್ನು ನೀಡುವುದಕ್ಕೆ ಪಠ್ಯಪುಸ್ತಕಗಳನ್ನು ಬಳಸುತ್ತಿದೆಯೇ ಹೊರತು ವಾಣಿಜ್ಯಿಕ ಮಾರಾಟಕ್ಕಲ್ಲ, ಹೀಗಾಗಿ ಅದು ಪ್ರಕಾಶಕರ ಕೃತಿಸ್ವಾಮ್ಯವನ್ನು ಉಲ್ಲಂಘಿಸುವುದಿಲ್ಲ ಎಂದು ಉಚ್ಚ ನ್ಯಾಯಾಲಯವು ಎತ್ತಿ ಹಿಡಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News