×
Ad

ಮೂಲಭೂತ ವ್ಯವಸ್ಥೆಗಳಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ : ಸಚ್ಚಿದಾನಂದ ಶೆಟ್ಟಿ

Update: 2016-09-17 19:31 IST

ಬಂಟ್ವಾಳ, ಸೆ. 17: ತಾಲೂಕಿನ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸಕಲ ಮೂಲಭೂತ ವ್ಯವಸ್ಥೆಗಳೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಅವರು ತಿಳಿಸಿದ್ದಾರೆ.

ಶನಿವಾರ ಸಂಜೆ ಶಾಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರ ಸಹಕಾರ ಹಾಗೂ ಸಚಿವ ರಮಾನಾಥ ರೈ ಸೇರಿದಂತೆ ಇತರ ಜನಪ್ರತಿನಿಧಿಗಳ ಅನುದಾನಗಳ ನೆರವಿನಿಂದ ನಿರೀಕ್ಷೆಗೂ ಮೀರಿ ಸಂಸ್ಥೆಯು ಬೆಳೆದು ನಿಂತಿದ್ದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜೊತೆಗೆ ಈ ಶಾಲೆಯ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಅಭೂತಪೂರ್ವವಾದ ಸಾಧನೆಯನ್ನು ಮಾಡಿರುವುದು ತಾಲೂಕಿಗೆ ಹೆಮ್ಮೆ ತಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ನಮ್ಮ ಶಾಲೆ-ನಮ್ಮೂರ ಶಾಲೆ ಎಂಬ ಪರಿಕಲ್ಪನೆಯಡಿಯಲ್ಲಿ ಪ್ರಗತಿ ಪಥದಿಂದ ಸಾಗುತ್ತಿರುವ ದಿ. ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸರಕಾರಿ ಶಾಲೆಯೊಂದರಲ್ಲಿ ಅಕ್ಷರ ದಾಸೋಹ ಯೋಜನೆಗೆ ಸ್ಟೀಮ್ ಅಳವಡಿಕೆಯ ಮೂಲಕ ಬಿಸಿಯೂಟ ತಯಾರಿಸಲಾಗುತ್ತಿದ್ದು ಏಕ ಕಾಲದಲ್ಲಿ ಸುಮಾರು 300 ವಿದ್ಯಾರ್ಥಿಗಳು ಅನ್ನಪೂರ್ಣ ಭವನದಲ್ಲಿ ಬಿಸಿಯೂಟ ಸೇವಿಸುತ್ತಿದ್ದಾರೆ ಎಂದು ಹೇಳಿದ ಅವರು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಶಾಲಾಭಿವೃದ್ಧಿ ಸಮಿತಿಯು ಅವರನ್ನು ಪ್ರೋತ್ಸಾಹಿಸುವಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ವಿವರಿಸಿದರು.

  ಶಾಲೆಯಲ್ಲಿ ಇಲಾಖಾ ನಿರ್ದೇಶನದಂತೆ ಪಠ್ಯಪೂರಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಶಾಲೆಯಲ್ಲಿ ಅಸ್ತಿತ್ವದಲ್ಲಿರುವ ಅಭಿನಯ ನಾಟಕ ಸಂಘವು ಕೂಡಾ ರಂಗ ಶಿಕ್ಷಣದ ಬಗ್ಗೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಈ ಸಂಘದ ಸದಸ್ಯರು ಅಭಿನಯಿಸಿದ ಹಲವು ನಾಟಕಗಳು ರಾಜ್ಯ ಪ್ರಶಸ್ತಿಗೆ ಭಾಜನವಾಗಿರುತ್ತದೆ 2015-16 ನೇ ಸಾಲಿನಲ್ಲಿ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಆಯೋಜಿಸಿದ ಚೊಚ್ಚಲ ’ಕಲಾ ಉತ್ಸವ’ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿತ್ತು. ಹಾಗೆಯೇ 2016-17ನೆ ಸಾಲಿನಲ್ಲಿ ಶಾಲಾ ನಾಟಕ ತಂಡವು ಪ್ರದರ್ಶಿಸಿದ ವಿಜ್ಞಾನ ನಾಟಕ ಮತ್ತು ಕಲಾ ಉತ್ಸವ ನಾಟಕ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಟಾಟಾ ಬಿಲ್ಡಿಂಗ್ ಇಂಡಿಯಾ ವತಿಯಿಂದ ನಡೆದ ಪ್ರಬಂಧ ಸ್ಪರ್ದೆಯಲ್ಲಿ ಶಾಲಾ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು, ದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ ಎಂದು ವಿವರಿಸಿದರು.

 ಆಂಗ್ಲ ಮಾಧ್ಯಮ ವಿಭಾಗ: 2015-16ನೆಯ ಸಾಲಿನಲ್ಲಿ 8ನೆಯ ತರಗತಿಯಿಂದ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲಾಗಿದೆ. ಪರಿಸರದಲ್ಲಿ ಅತೀ ಕಡು ಬಡತನದಲ್ಲಿರುವ ಐವರು ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ದತ್ತು ಸ್ವೀಕರಿಸಲಾಗಿದ್ದು ಇವರ ಪೂರ್ತಿ ಖರ್ಚು ವೆಚ್ಚವನ್ನು ಸ್ವತಹ ತಾನೆ ಭರಿಸುತ್ತಿದ್ದೇನೆ ಎಂದು ತಿಳಿಸಿದ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ಪ್ರತೀ ವರ್ಷ ಕೂಡಾ 10 ವಿದ್ಯಾರ್ಥಿಗಳನ್ನು ದತ್ತು ಪಡೆಯುವ ಗುರಿ ಹೊಂದಲಾಗಿದೆ ಎಂದರು.

ವಸತಿ ನಿಲಯ ನಿರ್ಮಾಣಕ್ಕೆ ಪ್ರಸ್ತಾವಣೆ: ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಪಕ್ಕದಲ್ಲೇ ವಸತಿ ನಿಲಯ ಹಾಗೂ ಆಟದ ಮೈದಾನ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಚಿವ ರಮಾನಾಥ ರೈ ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧವಾಗಿ ಪ್ರಕ್ರಿಯೆಗಳು ನಡೆಯುತ್ತಿದೆ ಎಂದ ಅವರು, ಬಿ.ಸಿ.ರೋಡಿನಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನರಿಕೊಂಬು, ಶಂಭೂರು, ಬಿಯಾಪಾದೆ ಮೂಲಕ ಮಾಣಿಗೆ ಸರಕಾರಿ ಬಸ್‌ನ ವ್ಯವಸ್ಥೆಯು ಶೀಘ್ರವೇ ಆರಂಭವಾಗಲಿದೆ ಎಂದರು. ಶಾಲೆಯಲ್ಲಿ ಖೋಟಿ ವೃಕ್ಷ ಆಂದೋಲನವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು ಪ್ರತೀಯೊಬ್ಬ ವಿದ್ಯಾರ್ಥಿಗೆ ಎರಡೆರಡು ಗಿಡಗಳನ್ನು ವಿತರಿಸಿ ಅವುಗಳ ಪೋಷಣೆಯ ಜವಾಬ್ದಾರಿ ನೀಡಲಾಗಿದ್ದು ಅದನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರಕಾರದ ಆದೇಶದಂತೆ ಆಝಾದಿ-70 ಯಾದ್‌ಕರೋ ಕುರ್ಬಾನಿ ಎಂಬ ಸ್ವಾತಂತ್ರ್ಯ ಪಾಕ್ಷಿಕ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಾಗೆಯೇ ಶಾಲೆಯಲ್ಲಿ ಜಲ ಮರು ಪೂರಣ ವ್ಯವಸ್ಥೆಗಳನ್ನು ಕೂಡಾ ಅಳವಡಿಸಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಕರಾದ ಕಮಲಾಕ್ಷ, ಪ್ರಕಾಶ್ ಎಂ., ಚಿನ್ನಪ್ಪ ಗೌಡ, ಸದಾಶಿವ ನಾಯಕ್, ಹರಿಪ್ರಸಾದ್, ಸುಶೀಲಾ, ವರಮಹಾಲಕ್ಷ್ಮಿ, ಭಾರತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News