×
Ad

ಗಿನ್ನಿಸ್ ದಾಖಲೆಗಾಗಿ ಆಟಿಕೆಯ ಕ್ಯೂಬ್‌ನಿಂದ ಕಲಾಕೃತಿ ರಚನೆ

Update: 2016-09-17 20:05 IST

ಬೆಳ್ತಂಗಡಿ,ಸೆ.17: ಆಟಿಕೆಯ ಕ್ಯೂಬ್‌ನಿಂದ ಕಲಾಕೃತಿಯನ್ನು ರಚಿಸಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಿದ್ದತೆಯಲ್ಲಿದ್ದಾರೆ ಉಜಿರೆ ಎಸ್.ಡಿ.ಎಂ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ಪೃಥ್ವೀಶ್ ಹಾಗೂ ತಂಡದವರು. ಅಕ್ಟೋಬರ್ ಎರಡರಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಭವನದಲ್ಲಿ ಗಿನ್ನಿಸ್ ದಾಖಲೆಯ ಕಲಾಕೃತಿಯ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಉಜಿರೆ ಎಸ್.ಡಿ.ಎಂ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ ಸುರೇಶ್ ತಿಳಿಸಿದ್ದಾರೆ.

ಅವರು ಶನಿವಾರ ಕಾಲೇಜಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಈಗಾಗಲೆ ಆಟಿಕೆಯ ಕ್ಯೂಬ್‌ನ ವಿಚಾರದಲ್ಲಿ ಹಲವು ದಾಖಲೆಗಳನ್ನು ಸ್ಥಾಪಿಸಿರುವ ಪೃಥ್ವೀಶ್ ಅವರು ಈ ಬಾರಿ ಗಿನ್ನಿಸ್ ದಾಖಲೆಗಾಗಿ 4000 ಕ್ಯೂಬ್ ಗಳನ್ನು ಬಳಸಿ ಕಲಾಕೃತಿಯನ್ನು ನಿರ್ಮಿಸಲು ಸಿದ್ದರಾಗಿದ್ದಾರೆ. ಇದರ ಮತ್ತೊಂದು ವಿಶೇಷವೆಂದರೆ ಕಲಾಕೃತಿಯ ಎರಡು ಬದಿಯಲ್ಲಿಯೂ ಬೇರೆ ಬೇರೆಯಾದ ಚಿತ್ರಗಳು ಮೂಡಿಬರಲಿದೆ. ವಿದೇಶಗಳಲ್ಲಿ ಏಕಮುಖ ಕಲಾಕೃತಿಳು ಕ್ಯೂಬ್‌ನಿಂದ ತಯಾರಾಗುತ್ತಿದ್ದು ಹಲವು ದಾಖಲೆಗಳನ್ನು ನಿರ್ಮಿಸಿದೆ. ಆದರೆ ಎರಡೂ ಬದಿಗಳಲ್ಲಿ ಬೇರೆ ಬೇರೆ ರಚನೆಗಳಿರುವ ಕಲಾಕೃತಿಯನ್ನು ರಚಿಸುವ ಪ್ರಯತ್ನ ಇದು ಮೊದಲನೆಯದಾಗಿದೆ. ಇದನ್ನು ಗಿನ್ನಿಸ್ ದಾಖಲೆಯಾಗಿ ರೂಪಿಸುವ ಗುರಿಯಿದ್ದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಗಿನ್ನಿಸ್ ದಾಖಲೆಗಾಗಿ ನಡೆಯುವ ಈ ಪ್ರಯತ್ನದಲ್ಲಿ ಇವರೊಂದಿಗೆ ಕಾಲೇಜಿನ ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ. ಅ 2 ರಂದು ಬೆಳಿಗ್ಗೆ ಏಳರಿಂದ ಮಧ್ಯಾಹ್ನ ಎರಡು ಗಂಟೆಯ ಒಳಗೆ ಈ ಕಲಾಕೃತಿಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಸ್ಥಳದಲ್ಲಿಯೇ ಕ್ಯೂಬ್‌ನ ಸಮಸ್ಯೆಯನ್ನು ಪರಿಹರಿಸಿ ಬೇಕಾದಂತೆ ರಚಿಸಿಕೊಂಡು ಅದನ್ನು ಜೋಡಿಸುತ್ತಾ ಕಲಾಕೃತಿಯನ್ನು ರಚಿಸಲಾಗುತ್ತದೆ ಎದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ಡಾ. ಬಸಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

      ಉಡುಪಿಯ ಪೇತ್ರಿ ನಿವಾಸಿ ಶ್ಯಾಮಪ್ರಸಾದ ಹಾಗೂ ಪ್ರಸನ್ನ ದಂಪತಿಗಳ ಮಗನಾಗಿರುವ ಪೃಥ್ವೀಶ ಇದೀಗ ಉಜಿರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾರೆ, ಕಳೆದ ಮೂರು ವರ್ಷಗಳಿಂದ ಕ್ಯೂಬ್ ಸಮಸ್ಯೆ ಪರಿಹರಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ ಎನ್ನುವ ಇವರು ಕೇವಲ ಕುತೂಹಲಕ್ಕಾಗಿ ಆರಂಭಿಸಿದ ಈ ಆಟ ಮತ್ತೆ ಮತ್ತೆ ಅಧ್ಯಯನವಾಗಿ ಮಾರ್ಪಟ್ಟಿತ್ತು ಬಳಿಕ ಕಳೆದ ವರ್ಷ ಐನೂರು ಜನರಿಗೆ ಇದನ್ನು ಕಲಿಸುವ ಕಾರ್ಯವನ್ನು ಮಾಡುವ ಮೂಲಕವಾಗಿ ಇವರು ಯುನಿಕ್ ವಿಶ್ವದಾಖಲೆಯನ್ನು ಹಾಗೂ ಅಸಿಸ್ಟ್ ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಒಂದು ನಿಮಿಷದ ಒಳಗೆ ಕ್ಯೂಬ್ ಸಮಸ್ಯೆಯನ್ನು ಪರಿಹರಿಸುವ ಇವರು ವೇಗವಾಗಿ ಕೇವಲ ಮೂವತ್ತೆಂಟು ಸೆಕೆಂಡ್‌ಗಳಲ್ಲಿ ಕ್ಯೂಬ್ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ಮಾಡುತ್ತಾರೆ, ಇದರ ವೇಗ ಹೆಚ್ಚಿಸುವ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡುತ್ತಿಲ್ಲ ಅದನ್ನು ಇತರರಿಗೆ ಕಲಿಸುವ ಕಾರ್ಯಕ್ಕೆ ಹೆಚ್ಚು ಮಹತ್ವ ನಿಡುತ್ತಿದ್ದೇನೆ ಎನ್ನುತ್ತಾರೆ ಇವರು.ಇದೀಗ ಗಿನ್ನಿಸ್ ದಾಖಲೆಯನ್ನು ಸ್ಥಾಪಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದು ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರವೇ ಮುಖ್ಯವಾಗಿದೆ. ಇದೀಗ ನಡೆಯುತ್ತಿರುವ ಗಿನ್ನಿಸ್ ದಾಖಲೆಯ ಪ್ರಯತ್ನಕ್ಕೆ ಸುಮಾರು ನಾಲ್ಕರಿಂದ ಐದು ಲಕ್ಷ ಖರ್ಚಾಗಲಿದ್ದು ಎಸ್.ಡಿ.ಎಂ ಶಿಕ್ಷಣಸಂಸ್ಥೆಗಳೆ ಮುಖ್ಯ ಪ್ರಾಯೋಜಕರಾಗಿದ್ದಾರೆ.

ಈ ಸಂದರ್ಭದಲ್ಲಿ 614 ಕ್ಯೂಬ್‌ಗಳನ್ನು ಉಪಯೋಗಿಸಿ ರಚಿಸಲಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರ ಕಲಾಕೃತಿಯನ್ನು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News