ಬೆಳ್ತಂಗಡಿ: ಶ್ರೀ ನಾರಾಯಣಗುರು ನಗರದ ನಾಮಫಲಕ ಅನಾವರಣ
ಬೆಳ್ತಂಗಡಿ,ಸೆ.17 : ಬೆಳ್ತಂಗಡಿ ನಗರ ಪ್ರದೇಶದಲ್ಲಿ ಶಾಸಕ ಕೆ. ವಸಂತ ಬಂಗೇರರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್, ಯುವವಾಹಿನಿ ಘಟಕ ಹಾಗೂ ಯುವ ವಾಹಿನಿ ಸಂಚಲನಾ ಸಮಿತಿ ಬೆಳ್ತಂಗಡಿ ನಗರ ಇವರ ಪ್ರಯತ್ನದಿಂದ ಇಲ್ಲಿನ ಪ್ರದೇಶಕ್ಕೆ ಶ್ರೀ ನಾರಾಯಣಗುರು ನಗರವೆಂದು ಹೆಸರಿರಿಸಿ, ಇದೀಗ ಗುರುಗಳ ನಾಮಫಲಕ ಅನಾವರಣಗೊಳಿಸಿರುವುದು ಅವರ ತತ್ವ ಸಂದೇಶಗಳಿಗೆ ಸಂದ ಗೌರವವಾಗಿದೆ ಎಂದು ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಹೇಳಿದರು.
ಅವರು ಶುಕ್ರವಾರ ಬೆಳ್ತಂಗಡಿ ಹಳೆಕೋಟೆ ಸಾಯಿ ಮಂದಿರದ ಎದುರುಗಡೆ ಪಟ್ಟಣ ಪಂಚಾಯಿತಿ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಹಾಗೂ ಯುವವಾಹಿನಿ ಸಂಚಲನಾ ಸಮಿತಿ ಬೆಳ್ತಂಗಡಿ ನಗರ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನದ ಶುಭ ಸಂದರ್ಭದಲ್ಲಿ ಶ್ರೀ ನಾರಾಯಣಗುರು ನಗರದ ನಾಮಫಲ ಅನಾವರಣಗೊಳಿಸಿ ಮಾತನಾಡಿದರು.
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರಸ್ತೆಗೆ ನಾರಾಯಣಗುರುಗಳ ಹೆಸರು ನೀಡಬೇಕು ಎಂದು ಪಂಚಾಯಿತಿಗೆ ಮನವಿ ನೀಡಿದ ಹಿನ್ನಲೆಯಲ್ಲಿ ಪಂಚಾಯಿತಿಯ ಎಲ್ಲಾ ಸದಸ್ಯರು ಪಕ್ಷಬೇದ ಮರೆತು ಹೆಸರಿಡಲು ಒಪ್ಪಿಗೆ ಸೂಚಿಸಿದ್ದರಿಂದ ಯಾವುದೇ ಅಡ್ಡಿಯಾತಂಕವಿಲ್ಲದೆ ಶೋಷಿತರ ಪರ ದ್ವನಿ ಎತ್ತಿದ ನಾರಾಯಣಗುರುಗಳ ಹೆಸರು ಈ ರಸ್ತೆಗೆ ಇಡಲಾಗಿದೆ. ಇದು ನಿಜವಾಗಿಯೂಹೆಮ್ಮೆಯ ವಿಚಾರವಾಗಿದೆ ಎಂದರು.
ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ ಮಾತನಾಡಿ ಒಂದೇ ಜಾತಿ ಒಂದೇ ಮತ ಒಂದೇ ಧರ್ಮ ಎಂದು ಸಾರಿದ ನಾರಾಯಣಗುರುಗಳ ಆದರ್ಶವನ್ನು ಇಂದು ಈ ಭಾಗದಲ್ಲಿ ಸಕಾರಗೊಳಿಸಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಗದೀಶ್ ಡಿ., ಸದಸ್ಯರುಗಳಾದ ಜೇಮ್ಸ್ ಡಿಸೋಜಾ, ರಾಜೇಶ ಪೂಜಾರಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಬಾಬು ಪೂಜಾರಿ ಕೆಲ್ಲಕೆರೆ ಉಪಸ್ಥಿತರಿದ್ದರು.
ಯುವವಾಹಿನಿ ಬೆಳ್ತಂಗಡಿ ಘಟಕದ ಉಪಾಧ್ಯಕ್ಷ ಅಶ್ವಥ್ ಸ್ವಾಗತಿಸಿ, ನಿರ್ದೇಶಕ ನಿತ್ಯಾನಂದ ನಾವರ ವಂದಿಸಿದರು. ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿದರು.