×
Ad

ಶೌಚಾಲಯದಲ್ಲಿ ಕ್ಯಾಮರಾ ಪ್ರಕರಣ:ಕೊಣಾಜೆ ಠಾಣೆಯೆದುರು ಕ್ಯಾಂಪಸ್ ಫ್ರಂಟ್‌ನಿಂದ ಪ್ರತಿಭಟನೆ

Update: 2016-09-17 20:24 IST

ಕೊಣಾಜೆ,ಸೆ.17: ಮಂಗಳೂರು ವಿವಿಯ ರಹಸ್ಯ ಮೊಬೈಲ್ ಕ್ಯಾಮರಾ ಪ್ರಕರಣದ ಆರೋಪಿಯ ಬಿಡುಗಡೆಗೆ ಪೊಲೀಸರು ಪರೋಕ್ಷವಾಗಿ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾವು ಕೊಣಾಜೆ ಪೊಲೀಸ್ ಠಾಣೆಯೆದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯನ್ನು ಒದಗಿಸಬೇಕೆಂದು ಆಗ್ರಹಿಸಿತು.

 ಕ್ಯಾಂಪಸ್ ಫ್ರಂಟ್‌ನ ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಮಾತನಾಡಿ, ಮಂಗಳೂರು ವಿವಿಯ ಬಯೋಸೈಯನ್ಸ್ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಇಟ್ಟು ಚಿತ್ರೀಕರಣ ನಡೆಸಿದ ಪ್ರಮುಖ ಆರೋಪಿ ಸಂತೋಷ್ ಆಚಾರ್ಯನ ಮೇಲೆ ದುರ್ಬಲ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆಗೊಳ್ಳಲು ಪರೋಕ್ಷ ಸಹಾಯ ಮಾಡಿದ ಪೊಲೀಸರ ಕ್ರಮವು ಖಂಡನೀಯವಾಗಿದೆ. ಇದು ಸಮಾಜ ಘಾತುಕರಿಗೆ ಇನ್ನಷ್ಟು ಕೃತ್ಯಗಳನು ನಡೆಸಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಆರೋಪಿಸಿದರು.

ದ,ಕ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು, ಗಣ್ಯರ ಒತ್ತಡಕ್ಕೆ ಮಣಿದ ಪರಿಣಾಮ ತನಿಖೆ ನಡೆಯುವ ಮೊದಲೇ ಆರೋಪಿ ಜಾಮೀನಿನಲ್ಲಿ ಬಿಡುಗಡೆಗೊಳ್ಳುವಂತಾಯಿತು. ಇಂತಹ ಕ್ರಮ ವಿದ್ಯಾರ್ಥಿನಿಯರನ್ನು ಮತ್ತು ಪೋಷಕರನ್ನು ಆತಂಕಕ್ಕೀಡುಮಾಡಿದೆ. ಆದ್ದರಿಂದ ಈ ಪ್ರಕರಣವನ್ನು ಕೂಡಲೇ ಸಿ.ಐ.ಡಿ.ಗೆ ಒಪ್ಪಿಸಿ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆ ಒದಗಿಸಬೇಕು. ಇಲ್ಲದಿದ್ದರೆ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಬಳಿಕ ಕಠಿಣ ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಪ್ರಂಟ್‌ನ ಮುಖಂಡರು ಪೊಲೀಸರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್‌ನ ಜಿಲ್ಲಾಕಾರ್ಯದರ್ಶಿ ಮಹಮ್ಮದ್ ಇಮ್ರಾನ್, ಜಿಲ್ಲಾ ಸಮಿತಿ ಸದಸ್ಯ ರಿಯಾಝ್, ತಾಲೂಕು ಅಧ್ಯಕ್ಷ ಸಾಹುಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾವು ಪ್ರತಿಭಟನೆಗೆ ಪೊಲೀಸ್ ಇಲಾಖಾ ಅನುಮತಿ ತೆಗೆದುಕೊಳ್ಳದೇ ಇದ್ದ ಕಾರಣ ಮೇರೆಗೆ ಪೊಲೀಸರು ಪ್ರತಿಭಟನೆ ಅವಕಾಶ ಕೊಡದೇ ಇದ್ದ ಪರಿಣಾಮ ಬಳಿಕ ಸಂಘಟನೆಯ ಸದಸ್ಯರು ಠಾಣೆಯೆದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News