×
Ad

ಕುಂಬ್ರ ಪೇಟೆಯಲ್ಲಿ ಸಭೆ-ಸಮಾರಂಭಕ್ಕೆ ಅನುಮತಿಗೆ ನಿರ್ಣಯ: ಪೊಲೀಸ್ ತೀರ್ಮಾನಕ್ಕೆ ಉಲ್ಟಾ ಹೊಡೆದ ಗ್ರಾಮ ಪಂಚಾಯತ್

Update: 2016-09-17 20:29 IST

ಪುತ್ತೂರು,ಸೆ.17: ಸಾರ್ವಜನಿಕರಿಗೆ ತೊಂದರೆ ಹಾಗೂ ಟ್ರಾಫಿಕ್ ಸಮಸ್ಯೆ ಎದುರಾಗುವ ಹಿನ್ನಲೆಯಲ್ಲಿ ಒಳಮೊಗ್ರು ಗ್ರಾಮದ ಕುಂಬ್ರ ಪೇಟೆಯ ಜಂಕ್ಷನ್‌ನಲ್ಲಿರುವ ಅಶ್ವಸ್ಥ ಕಟ್ಟೆಯ ಬಳಿ ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಯಾವುದೇ ರೀತಿಯ ಪ್ರತಿಭಟನಾ ಸಭೆ ನಡೆಸಲು ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಕಳೆದ ಆಗಸ್ಟ್ 25ರಂದು ಕೈಗೊಂಡಿದ್ದ ತೀರ್ಮಾನಕ್ಕೆ ಅನುಮತಿ ನೀಡಿದ್ದ ಒಳಮೊಗ್ರು ಗ್ರಾಮ ಪಂಚಾಯಿತ್ ಅಧ್ಯಕ್ಷರು ಇದೀಗ ಸದಸ್ಯರ ಆಗ್ರಹದ ಮೇರೆಗೆ ಅನುಮತಿ ನೀಡುವ ನಿರ್ಣಯ ಕೈಗೊಂಡಿದ್ದಾರೆ.

ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕುಂಬ್ರ ಜಂಕ್ಷನ್‌ನಲ್ಲಿರುವ ಅಶ್ವಸ್ಥ ಕಟ್ಟೆಯ ಬಳಿ ಸಾರ್ವಜನಿಕ ಸಭೆ,ಸಮಾರಂಭಗಳಿಗೆ ಈ ಹಿಂದಿನಂತೆಯೇ ಯಥಾ ಪ್ರಕಾರ ಅವಕಾಶ ಕಲ್ಪಿಸಿಕೊಡುವುದೆಂಬ ತೀರ್ಮಾನ ಕೈಗೊಳ್ಳಲಾಗಿದೆ.
     
ಮಾಣಿ- ಮೈಸೂರು ಹೆದ್ದಾರಿ ಬದಿಯಲ್ಲಿರುವ ಕುಂಬ್ರ ಪೇಟೆಯ ಮಧ್ಯಭಾಗದಲ್ಲಿರುವ ಅಶ್ವಥ್ಥ ಕಟ್ಟೆಯ ಎರಡೂ ಬದಿಗಳಲ್ಲಿ ರಸ್ತೆ ಹಾದು ಹೋಗುವ ಕಾರಣ ಕಟ್ಟೆಯ ಬಳಿ ಸಭಾ ಕಾರ್ಯಕ್ರಮ ನಡೆಸಿದರೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಮತ್ತು ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಸಂಪ್ಯ ಗ್ರಾಮಾಂತರ ಠಾಣೆಯ ಎಸ್ ಐ ಅಬ್ದುಲ್ ಖಾದರ್ ಅವರು ಕಳೆದ ಆಗಸ್ಟ್ 25ರಂದು ಕುಂಬ್ರ ಪೇಟೆಗೆ ಭೇಟಿಯಿತ್ತು ಪರಿಶೀಲಿಸಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅವರೊಂದಿಗೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದರು. ಈ ತೀರ್ಮಾನ ಕೈಗೊಂಡ ಬೆನ್ನಲ್ಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಕುಂಬ್ರದ ಅಶ್ವಥ ಕಟ್ಟೆಗೆ ತನ್ನದೇ ಆದ ಇತಿಹಾಸವಿದೆ. ಅನಾದಿ ಕಾಲದಿಂದಲೂ ಇಲ್ಲಿ ದೈವಗಳ ಸೇವೆ, ಚೌತಿ , ಹಾಗೂ ರಾಜಕೀಯ ಕಾರ್ಯಕ್ರಮಗಳು ನಡೆಯುತ್ತದೆ. ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆಯಾದರೆ ಅದನ್ನು ಪೊಲೀಸರೇ ನಿಭಾಯಿಸಬೇಕು. ಕುಂಬ್ರ ಅಶ್ವಥ ಕಟ್ಟೆಯ ಬಳಿ ನಡೆಯುವ ಕಾರ್ಯಕ್ರಮಗಳು ಇನ್ನು ಮುಂದೆಯೂ ಯಥಾವತ್ತಾಗಿ ನಡೆಯಲಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದ್ದಲ್ಲಿ ಪ್ರತಿಭಟನೆ ನಡೆಬೇಕಾಗುತ್ತದೆ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವಕೀಲ ದುರ್ಗಾಪ್ರಸಾದ್ ರೈ ಅವರು ಎಚ್ಚರಿಕೆ ನೀಡಿದ್ದರು.
ಉಲ್ಟ ಹೊಡೆದ ಪಂಚಾಯಿತಿ ತೀರ್ಮಾನ:
ಕುಂಬ್ರ ಜಂಕ್ಷನ್ ಬಳಿ ಯಥಾ ಪ್ರಕಾರ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಒಳಮೊಗ್ರು ಗ್ರಾಮ ಸಮಿತಿಯವರು ಗ್ರಾಮ ಪಂಚಾಯತ್‌ಗೆ ಸಲ್ಲಿಸಿದ್ದ ಮನವಿಯ ವಿಚಾರ ಶುಕ್ರವಾರ ನಡೆದ ಗ್ರಾಮ ಪಂಚಾಯತ್ ಸಬೆಯಲ್ಲಿ ಪ್ರಸ್ತಾಪವಾಯಿತು. ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರು ವಿಷಯ ಪ್ರಸ್ತಾಪಿಸಿ ಪಂಚಾಯತ್ ಅಧ್ಯಕ್ಷರಿಗಾಗಲೀ, ಪೊಲೀಸ್ ಇಲಾಖೆಗಾಗಲೀ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿಯಾಗಿ ಈ ರೀತಿಯ ತೀರ್ಮಾನ ಕೈಗೊಳ್ಳಲು ಅವಕಾಶವಿಲ್ಲ. ಏಕಪಕ್ಷೀಯವಾಗಿ ತೆಗೆದುಕೊಳ್ಳಲಾದ ಈ ತೀರ್ಮಾನ ಕಾನೂನು ಬಾಹಿರವಾಗಿದ್ದು, ಪಂಚಾಯತ್ ಸಭೆಯಲ್ಲಿ ಏನು ತೀರ್ಮಾನ ಕೈಗೊಳ್ಳುತ್ತೇವೆಯೋ ಅದು ಪಾಲನೆಯಾಗಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು ನಾನು ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಸಮಜಾಯಿಕೆ ನೀಡಿದರು. ಸದಸ್ಯರಾದ ಮಹೇಶ್ ರೈ, ಶಶಿಕಿರಣ್ ರೈ ಮತ್ತಿತರರು ಅಲ್ಲಿ ಸಾರ್ವಜನಿಕ ಸಭೆ,ಸಮಾರಂಭಗಳಿಗೆ ಎಂದಿನಂತೆಯೇ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ಈ ಕುರಿತು ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಕುಂಬ್ರ ಜಂಕ್ಷನ್‌ನಲ್ಲಿರುವ ಅಶ್ವಥ ಕಟ್ಟೆಯ ಬಳಿ ಸಾರ್ವಜನಿಕ ಸಭೆ,ಸಮಾರಂಭಗಳಿಗೆ ಈ ಹಿಂದಿನಂತೆಯೇ ಯಥಾ ಪ್ರಕಾರ ಅವಕಾಶ ಕಲ್ಪಿಸಿಕೊಡುವುದು ಎಂಬ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ತಾಲೂಕು ಪಂಚಾಯತ್ ಸದಸ್ಯ ಹರೀಶ್ ಬಿಜತ್ರೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುನಂದ , ಕಾರ್ಯದರ್ಶಿ ದಾಮೋದರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News