ಕೆ.ಎಸ್.ನರಸಿಂಹಸ್ವಾಮಿ ಅಗ್ರ ಪಂಕ್ತಿಯ ಸೃಜನಾತ್ಮಕ ಸಾಹಿತಿ: ಡಾ. ತಾಳ್ತಜೆ
ಪುತ್ತೂರು.ಸೆ.17: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಮಂದಿ ಪ್ರಾತಃಸ್ಮರಣೀಯ ಕವಿಗಳು, ಸಾಹಿತಿಗಳು ಆಗಿ ಹೋಗಿದ್ದಾರೆ. ಅಂತವರಲ್ಲಿ ಕೆ ಎಸ್ ನರಸಿಂಹಸ್ವಾಮಿ ಅವರು ಒಬ್ಬ ಅಗ್ರ ಪಂಕ್ತಿಯ ಸೃಜನಾತ್ಮಕ ಸಾಹಿತಿ ಎಂದು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ಪುತ್ತೂರಿನ ಸಂತ ಫೀಲೋಮಿನಾ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ಸಂತ ಫಿಲೋಮಿನಾ ಕಾಲೇಜಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪುತ್ತೂರು ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಸಂತ ಫಿಲೋಮಿನಾ ಕಾಲೇಜಿನ ಸುವರ್ಣ ಮಹೋತ್ಸವ ನೆನಪಿನಲ್ಲಿ ನಡೆದ ಕೆ.ಎಸ್. ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೆ ಎಸ್ ನರಸಿಂಹಸ್ವಾಮಿ ಅವರನ್ನು ಪ್ರಣಯ ಕವಿ, ಪ್ರೇಮ ಕವಿ, ದಾಂಪತ್ಯ ಕವಿ ಎಂದೆಲ್ಲಾ ಕರೆಯಲಾಗಿದೆ. ಅವರು ತನ್ನ ಕೃತಿಗಳಲ್ಲಿ ಆಗ ತಾನೆ ಮದುವೆಯಾಗಿ, ಹೊಸದರಲ್ಲಿರುವ ಗಂಡು ಹೆಣ್ಣಿನ ನಡುವಣ ಸಂಬಂಧವನ್ನು ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ಅವರು ರಚಿಸಿರುವ ಪ್ರೇಮ ಗೀತೆಗಳನ್ನು ದಾಂಪತ್ಯ ಗೀತೆಗಳೆಂದು ಕರೆಯುವುದೇ ಹೆಚ್ಚು ಸೂಕ್ತ ಎಂದರು. ಇಂದಿನ ದಿನಗಳಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ನಲವತ್ತು-ಐವತ್ತರ ನಂತರದ ವಯೋಮಾನದವರೇ ಹೆಚ್ಚಾಗಿ ಭಾಗವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಯುವ ಪೀಳಿಗೆಗೆ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಅವರು ಮಾತನಾಡಿ, ನಾವೆಲ್ಲರೂ ನಮ್ಮ ಭಾಷೆ, ನಮ್ಮ ನುಡಿ ಮತ್ತು ನಮ್ಮ ನೆಲ ಎಂಬದಾಗಿ ಬಹಳಷ್ಟು ಮಾತನಾಡುತ್ತೇವೆ. ಇದರಲ್ಲಿ ಒಂದು ರೀತಿಯ ಸಂಕುಚಿತ ಮನೋಭಾವನೆ ಕಾಣುತ್ತದೆ. ನಮ್ಮಲ್ಲಿ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಾಗಬೇಕಾದರೆ ಆಸಕ್ತಿ ಮತ್ತು ಅನಿವಾರ್ಯತೆ ಅಗತ್ಯವಿದೆ. ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಹವ್ಯಾಸವನ್ನು ಅಳವಡಿಸಿಕೊಂಡಾಗ ಭಾಷಾ ಪಾಂಡಿತ್ಯವನ್ನು ಗಳಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ ಅವರು ಅಧ್ಯಕ್ಷತೆ ವಹಿಸಿದ್ದರು. ಇಂದಿನ ಕಂಪ್ಯೂಟರ್ ಯುಗದಲ್ಲಿ ಯುವ ಜನಾಂಗವು ಓದುವ ಹವ್ಯಾಸವನ್ನು ಕಡಿಮೆ ಮಾಡಿದೆ ಎಂದ ಅವರು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅನನ್ಯವಾದುದು. ನಾವು ಬಳಸುವ ಭಾಷೆಯು ಶಿಸ್ತುಬದ್ದವಾಗಿರಬೇಕು. ಆಗ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಪ್ರಥಮ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಅವರು ಕೆ ಎಸ್ ನರಸಿಂಹಸ್ವಾಮಿ ಅವರ ಪ್ರೇಮ ಕವಿತೆಗಳ ಬಗ್ಗೆ, ದ್ವಿತೀಯ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್ ನರಸಿಂಹಮೂರ್ತಿ ಮಂಗಳೂರು ಅವರು ಕೆ ಎಸ್ ನರಸಿಂಹಸ್ವಾಮಿ ಅವರ ಕಥನ ಕವನಗಳ ಕುರಿತು ವಿಚಾರ ಮಂಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕದ ಗೌರವ ಕಾರ್ಯದರ್ಶಿ ಡಾ. ಶ್ರೀಧರ.ಎಚ್.ಜಿ ಅವರು ಇದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಮಾರ ಮೊಳೆಯಾರ ಅವರು ಸ್ವಾಗತಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಹರಿಣಾಕ್ಷಿ ಎಂ.ಡಿ ವಂದಿಸಿದರು. ಕನ್ನಡ ಉಪನ್ಯಾಸಕ ಡಾ. ಬಸ್ತ್ಯಾಂ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.