ಮುಂಡಗೋಡ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
ಮುಂಡಗೋಡ,ಸೆ.17: ಜಾತಿ, ಒಂದೇ ಧರ್ಮ, ಒಂದೇ ದೇ ವರು ಎಂದು ಬೋಧಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿ, ಮತಬೇಧಗಳು ಹೆಚ್ಚಾಗಿದ್ದ ಕಾಲದಲ್ಲಿ ಸಮಾಜ ಸುಧಾರಕರಾಗಿ ಉದಯಿಸಿದ ತಾರತಮ್ಯ ಕಡಿಮೆ ಮಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಇದುವರೆಗೂ ಸಮಾಜದ ಕಟ್ಟಕಡೆಯ ಜನ ಅವರನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದರು. ಅವರು ತಾಲೂಕಿನ ನ್ಯಾಸರ್ಗಿಯಲ್ಲಿ ನಾರಾಯಣಗುರು ಧರ್ಮ ಪರಿಪಾಲನಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಬ್ರಹ್ಮಶ್ರೀ ನಾರಾಯಣಗುರುಗಳ 162ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಎಲ್ಲ ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಒಂದು ಹೊತ್ತಿನ ಊಟಕ್ಕೆ ಕಡಿಮೆಯಾದರೂ ಶಿಕ್ಷಣಕ್ಕೆ ಕೊರತೆಯಾಗಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ. ಇಲ್ಲವಾದರೆ ಹಿಂದುಳಿದವರು ಹಿಂದೆಯೇ ಉಳಿದಿರಬೇಕಾಗುತ್ತದೆ. ಹಿಂದುಳಿದವರಿಗೆ ದೊರೆಯಬೇಕಾದ ಅನೇಕ ಸೌಲಭ್ಯಗಳು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ತಲುಪುವುದೇ ಇಲ್ಲ ಎಂದು ಅವರು ವಿಷಾಧಿಸಿದರು.
ಮಾತಿನ ನಡುವೆ ಮುಂಡಗೋಡದೊಂದಿಗಿನ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡ ಅವರು, ತಮ್ಮ ಸಹೋದರಿ 1972ರಲ್ಲಿ ಇಲ್ಲಿ ಡಾಕ್ಟರ ಸೇವೆಯಲ್ಲಿ ಇದ್ದಾಗ ಇಲ್ಲಿ ಬಂದು ಹೋಗುತ್ತಿದ್ದುದನ್ನು ನೆನಪಿಸಿಕೊಂಡರು. ಅಂದಿಗೂ ಇಂದಿಗೂ ಮುಂಡಗೋಡ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೆನರಾ ಸಂಸದ ಅನಂತಕುಮಾರ ಹೆಗಡೆ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು. ರುದ್ರಮುನಿ ಸ್ವಾಮೀಜಿ, ತಾಪಂ. ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ, ಉಪನ್ಯಾಸಕ ಈಶ್ವರ ನಾಯ್ಕ ವೇದಿಕೆಯಲ್ಲಿದ್ದರು.