ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ : ಹಿಂಜಾವೇ ಮುಖಂಡನ ಜಾಮೀನು ಅರ್ಜಿ ವಜಾ
ಉಡುಪಿ, ಸೆ.17: ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ 18ನೆ ಆರೋಪಿ ಹಿಂದು ಜಾಗರಣಾ ವೇದಿಕೆಯ ಮುಖಂಡ ಕುಂಭಾಶಿಯ ಅರವಿಂದ ಕೋಟೇಶ್ವರ(37) ಎಂಬಾತನ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿ ಆದೇಶ ನೀಡಿದೆ.
ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಪ್ರಚೋದನೆ ನೀಡಿರುವ ಆರೋಪದಡಿ ಬಂಧಿತನಾಗಿರುವ ಅರವಿಂದ ಕೋಟೇಶ್ವರನಿಗೆ ಜಾಮೀನು ನೀಡುವಂತೆ ವಕೀಲ ರವಿಕಿರಣ್ ಮುರ್ಡೇಶ್ವರ ಆ.31ರಂದು ಉಡುಪಿ ಜಿಲ್ಲಾ ಮತ್ತು ಸ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ಅಭಿ ಯೋಜಕಿ ಶಾಂತಿ ಬಾಯಿ, ಅರವಿಂದ ಕೋಟೇಶ್ವರನ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಪರಿಶೀಲನೆ ನಡೆಸಿದ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದರು.
ಹೆಬ್ರಿ ಸಂತೆಕಟ್ಟೆಯಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿದ್ದ ಅರವಿಂದ ಕೋಟೇಶ್ವರ್ ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆಗೆ ಪ್ರಚೋದನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸರು ಆತನನ್ನು ಆ.18ರಂದು ಬಂಧಿಸಿ ದ್ದರು. ಇದೀಗ ಅರವಿಂದ ಕೋಟೇಶ್ವರ್ ಸೆ.28ರರೆಗೆ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಅದೇ ರೀತಿ ಇದೇ ಪ್ರಕರಣದ ಇನ್ನೋರ್ವ ಆರೋಪಿ ಕುಚ್ಚೂರು ಬಾದ್ಲ್‌ನ ರಾಘವೇಂದ್ರ ಶೆಟ್ಟಿ(22)ಗೆ ಜಾಮೀನು ನೀಡುವಂತೆ ವಕೀಲ ವೈ.ವಿಕ್ರಂ ಹೆಗ್ಡೆ ಇಂದು ಉಡುಪಿ ಜಿಲ್ಲಾ ಮತ್ತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಈತನನ್ನು ಬ್ರಹ್ಮಾವರ ಪೊಲೀಸರು ಆ.19ರಂದು ಬಂಧಿಸಿದ್ದರು.