ಮತಾಂತರದ ಕುರಿತು ಗೌಡ ಯುವ ಸೇವಾ ಆತಂಕ : ಕಾಣೆಯಾಗಿರುವ ದೀಕ್ಷಿತ್ ಗೌಡ ಪತ್ತೆಗೆ ಆಗ್ರಹ
ಸುಳ್ಯ,ಸೆ.17: ತಾಲೂಕಿನಲ್ಲಿ ನಡೆಯುತ್ತಿರುವ ಶಂಕಿತ ಮತಾಂತರದ ಕುರಿತು ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘ ಆತಂಕ ವ್ಯಕ್ತಪಡಿಸಿದ್ದು, ಕೃತ್ಯವನ್ನು ಖಂಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಅರಂಬೂರು ಪಾಲಡ್ಕದ ಜನಾರ್ದನ ಗೌಡರ ಪುತ್ರ ದೀಕ್ಷಿತ್ ಗೌಡ ಬಾಹ್ಯ ಒತ್ತಡದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ಸೆಪ್ಟಂಬರ್ 9ರಿಂದ ಕಾಣೆಯಾಗಿದ್ದಾನೆ. ಹಿಂದೂ ಧರ್ಮದ ಗೌಡ ಜಾತಿಯ ಇಂತಹ ಯುವಕನನ್ನು ಯಾವುದೋ ಆಸೆ ಆಕಾಂಕ್ಷೆಗಳಿಂದ ಮನ ಪರಿವತಿಸಿ, ಈ ಸ್ಥಿತ್ಯಂತರಕ್ಕೆ ಕಾರಣವಾಗಿರುವುದನ್ನು ಸುಳ್ಯದ ಗೌಡ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ದೀಕ್ಷಿತ್ ಗೌಡನನ್ನು ತಕ್ಷಣ ಪತ್ತೆ ಮಾಡಿಕೊಡುವಂತೆ ಹಾಗೂ ಇದಕ್ಕೆ ಕಾರಣರಾದವರನ್ನು ಕಂಡು ಹಿಡಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುಳ್ಯದ ಸುತ್ತಮುತ್ತಲಿನ ಹಾಗೂ ನೆರೆಯ ಜಿಲ್ಲೆಗಳಿಂದ ಕೇಳಿ ಬರುವ ಇಂತಹ ವಿಷಯಗಳು ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಗೌಡ ಸಮಾಜದ ಪ್ರತಿಯೊಬ್ಬ ತಂದೆ-ತಾಯಿ ಎಚ್ಚೆತ್ತುಕೊಂಡು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು. ದೂರದ ಪ್ರದೇಶದಲ್ಲಿ ವಿಶೇಷವಾಗಿ ಕೇರಳ ಭಾಗಗಳಲ್ಲಿ ಶಿಕ್ಷಣ, ಉದ್ಯೋಗ ಮಾಡುತ್ತಿರುವ ಯುವಜನರಿಗೆ ಆಸೆ-ಅಮಿಷಗಳನ್ನು, ಮತಾಂತರದ ನೆಪದಲ್ಲಿ ದಾರಿ ತಪ್ಪಿಸಿ ತಮ್ಮ ಉದ್ದೇಶಗಳಿಗೆ ಬಳಸಿಕೊಳ್ಳುವ ಜಾಲವಿದ್ದು, ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕೆಂದು ಅವರು ಹೇಳಿದರು.
ಗೌಡ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್‌ರಾಂ ಸುಳ್ಳಿ, ಎ.ವಿ.ತೀರ್ಥರಾಮ, ಜಾಕೆ ಸದಾನಂದ, ಕೆ.ಸಿಸದಾನಂದ, ಜಯರಾಮ ದೇರಪ್ಪಜ್ಜನಮನೆ, ವಸಂತ ಕಿರಿಭಾಗ, ಜಗದೀಶ ಅರಂಬೂರು, ನಗರ ಘಟಕದ ಅಧ್ಯಕ್ಷ ಸಂತೋಷ್ ಮಡ್ತಿಲ, ಕಾರ್ಯದರ್ಶಿ ರೋಹಿತ್ ಕೊಂಗೋಡಿ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಕಾರ್ಯದರ್ಶಿ ವಿನುತಾ ಪಾತಿಕಲ್ಲು, ತರುಣ ಘಟಕದ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಪತ್ರಿಕಾಗೋಷ್ಠಿಯಲ್ಲಿದ್ದರು.