ನಿಸರ್ಗದ ಏಕಾಂತ ಮತ್ತು ಯಕ್ಷಗಾನ ಸಾಹಿತ್ಯದ ಅಭಿರುಚಿ ಬೆಳೆಸಿತು : ಚೊಕ್ಕಾಡಿ

Update: 2016-09-17 16:52 GMT

ಪುತ್ತೂರು,ಸೆ.17 : ಚೊಕ್ಕಾಡಿಯ ನಿಸರ್ಗದಲ್ಲಿನ ತಲ್ಲಗೊಳಿಸುವ ಏಕಾಂತ ಮತ್ತು ಪ್ರಕೃತಿಯ ಸೊಬಗು, ಯಕ್ಷಗಾನದ ಹಿನ್ನೆಲೆ, ಪುಸ್ತಕ ಮಾರಾಟ ಮತ್ತು ಓದುವ ಹವ್ಯಾಸ ತನ್ನಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿತು. ಗೋಪಾಲಕೃಷ್ಣ ಅಡಿಗರ ಚಂಡೆಮದ್ದಳೆ ತಾನು ಸಾಗಬೇಕಾದ ಕಾವ್ಯದ ದಾರಿಯನ್ನು ತೆರೆದು ತೋರಿಸಿತು. ಪರಂಪರೆಯ ಪ್ರಭಾವದಿಂದ ಬಿಡಿಸಿಕೊಳ್ಳುವುದಕ್ಕಾಗಿ ಮತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಭಾವಗೀತೆಗಿಂತ ಭಿನ್ನವಾದ ಕಾವ್ಯದ ದಾರಿಯನ್ನು ಆರಿಸಿಕೊಳ್ಳುವ ಅನಿವಾರ್ಯತೆಯಿತ್ತು ಎಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು ಹೇಳಿದರು.

ಪುತ್ತೂರು ತಾಲ್ಲೂಕಿನ ಪೆರ್ನಾಜೆ ಸೀತಾರಾಘವ ಪದವಿಪೂರ್ವ ಕಾಲೇಜು ಪೆರ್ನಾಜೆ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ ಇದರ ಸಹಯೋಗದಲ್ಲಿ ಗುರುವಾರ ನಡೆದ ಸುವರ್ಣ ಸಾಹಿತ್ಯ ಸಂಭ್ರಮ ’ಕವಿ ಮನ-ಕವಿ ನಮನ’ ಕಾರ್ಯಕ್ರಮದಲ್ಲಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಪರಿಸರ ಗೀತೆಯನ್ನು ಬರೆಯುವುದರ ಮೂಲಕ ಮತ್ತೊಮ್ಮೆ ಹಾಡುಗಳನ್ನು ಬರೆಯುವುದಕ್ಕೆ ಸಾಧ್ಯವಾಯಿತು. ಶಿಕ್ಷಕರಾದವರು ವಿದ್ಯಾರ್ಥಿಗಳಲ್ಲಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಿ ಪೋಷಿಸಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಸಬೇಕು ಎಂದು ಅವರು ಹೇಳಿದರು.

  ಅಭಿನಂದನಾ ಭಾಷಣ ಮಾಡಿದ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್. ಜಿ. ಅವರು ಅಡಿಗರ ಪರಂಪರೆಯನ್ನು ಕರಾವಳಿಯ ಪ್ರದೇಶದಲ್ಲಿ ಸುಬ್ರಾಯ ಚೊಕ್ಕಾಡಿಯವರು ಸಮರ್ಥವಾಗಿ ಮುನ್ನಡೆಸಿದರು. ಹಳ್ಳಿಯಲ್ಲಿದ್ದರೂ ಚೊಕ್ಕಾಡಿಯವರ ದೃಷ್ಟಿ ವಿಶ್ವಾತ್ಮಕವನ್ನು ಒಳಗೊಂಡಿತ್ತು. ಚೊಕ್ಕಾಡಿಯ ಕವಿತೆಗಳಿಗೆ ನೋವನ್ನು ಮರೆಸುವ ಗುಣವಿದೆ. ಚೊಕ್ಕಾಡಿಯವರ ಕವಿತೆಗಳಲ್ಲಿ ಮರ ಮತ್ತು ಹಕ್ಕಿಯ ರೂಪಕಗಳು ಆಗಾಗ ಮರುಕಳಿಸುತ್ತವೆ. ಸುಬ್ರಾಯ ಚೊಕ್ಕಾಡಿಯವರ ಕವಿತೆಗಳಲ್ಲಿರುವ ಲಯ ವೈವಿಧ್ಯವನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದರು.

  ಸೀತಾರಾಘವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಿ.ಕೆ. ಶಂಕರ ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಐತಪ್ಪ ನಾಯ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಶಿವಶಂಕರ ಭಟ್ ಸ್ವಾಗತಿಸಿದರು.ಪಿ. ಶ್ರೀಕೃಷ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News