×
Ad

ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ - ಇಬ್ಬರ ಬಂಧನ

Update: 2016-09-17 22:29 IST

 ಉಪ್ಪಿನಂಗಡಿ,ಸೆ.17: ಅಕ್ರಮವಾಗಿ ಸಾಗಿಸುತ್ತಿದ್ದ 5 ಜಾನುವಾರುಗಳ ಸಹಿತ ಟೆಂಪೋವನ್ನು ಶನಿವಾರ ವಶಪಡಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು, ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಚನ್ನರಾಯಪಟ್ಟಣದ ಗೋಮಾರನಹಳ್ಳಿ ನಿವಾಸಿ ಕುಮಾರ (63) ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಬದಿಗುಡ್ಡೆ ನೂಜೀರು ನಿವಾಸಿ ಶರೀಫ್ (25) ಬಂಧಿತ ಆರೋಪಿಗಳು. ಇದರಲ್ಲಿ ಕುಮಾರ ಟೆಂಪೋ ಚಾಲಕನಾಗಿದ್ದ. ಉಪ್ಪಿನಂಗಡಿ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ ಅವರು ಶನಿವಾರ ಮಧ್ಯಾಹ್ನ ಗಸ್ತು ನಿರತರಾಗಿದ್ದ ಸಂದರ್ಭ 34ನೆ ನೆಕ್ಕಿಲಾಡಿ ಜಂಕ್ಷನ್‌ನಲ್ಲಿ ಟೆಂಪೋವೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದು, ಈ ಸಂದರ್ಭ ಅದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಯಿತು. ಆರೋಪಿಗಳಿಬ್ಬರನ್ನು ಬಂಧಿಸಿದ ಪೊಲೀಸರು ಜಾನುವಾರು ಹಾಗೂ ಟೆಂಪೋವನ್ನು ವಶಕ್ಕೆ ತೆಗೆದುಕೊಂಡರು. ಆರೋಪಿಗಳಿಬ್ಬರು ಚನ್ನರಾಯಪಟ್ಟಣದಿಂದ 4 ದನಗಳನ್ನು ಹಾಗೂ 1 ಎತ್ತನ್ನು ಟೆಂಪೋದಲ್ಲಿ ಅಕ್ರಮವಾಗಿ ಮಂಗಳೂರಿನ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News