ಜಾತಿ, ಧರ್ಮದ ಆಧಾರದಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದು ಖಂಡನೀಯ: ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ

Update: 2016-09-17 17:33 GMT

ಬೆಂಗಳೂರು,ಸೆ.17:ವಿವಿಧತೆಯಲ್ಲಿ ಏಕತೆಯನ್ನು ಸಾರಿದ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಪರಾಧಿಗಳ ಜಾತಿ,ಧರ್ಮ ನೋಡಿ ಶಿಕ್ಷಿಸುವುದುತ್ತಿರುವುದು ದೇಶದ ಅತೀ ದೊಡ್ಡ ದುರಂತವೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸ ಅದಿಯವರು ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ  ಹೇಳಿದರು.

ಮಂಗಳೂರಿನ ವಿಶ್ವ ವಿದ್ಯಾನಿಲಯದ ಮಹಿಳಾ ಶೌಚಾಲಯದೊಳಗೆ ಗುಪ್ತ ಕ್ಯಾಮರಾವನ್ನು ಇರಿಸಿದ ಆರೋಪಿಗೆ ಇಪ್ಪತ್ತನಾಲ್ಕು ಗಂಟೆಯೊಳಗೆ ಜಾಮೀನು ಸಿಗುವುದಾದರೆ,  ವಿದ್ಯಾರ್ಥಿನಿಯರ ಮಾನಕ್ಕೆ ಬೆಲೆ ಇಲ್ಲವೇ.? ಎಂದು ಪ್ರಶ್ನಿಸಿದ ಶಾಫಿ ಸ ಅದಿ ಇದೊಂದು ಗಂಭೀರ ಪ್ರಕರಣವಾಗಿದ್ದು, ಮುಂದಿನ ದಿನಗಳಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಇಂತಹ ವಿಶ್ವ ವಿದ್ಯಾಲಯಕ್ಕೆ ಕಳುಹಿಸಲು ಆತಂಕ ಪಡಬೇಕಾದಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು. ನ್ಯಾಯ ಪಾಲಕರು ಇಂತಹ ಪ್ರಕರಣಗಳಲ್ಲಿ ಮೃಧು ಧೋರಣೆ ಅನುಸರಿಸುವುದು ಸರಿಯಲ್ಲವೆಂದು ಹೇಳಿದ ಅವರು, ಕರಾವಳಿ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸ್ಕಾರ್ಫ್ ವಿವಾದವು ಮುಸ್ಲಿಂ ಸಹೋದರಿಯರ ಶೈಕ್ಷಣಿಕ ಪ್ರಗತಿಯನ್ನು ತಡೆಯಲು ಕಂಡುಕೊಂಡ ಮಾರ್ಗವೆಂದು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳಲ್ಲಿ ನ್ಯಾಯ ಪಾಲಕರು ಅಪರಾಧಿಗಳ ವಿರುದ್ಧ ತೋರುವ ಮೃಧು ಧೋರಣೆಗಳಿಂದ ರಾಜ್ಯದಲ್ಲಿ ಮತ್ತೆ ಮತ್ತೆ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ.ನ್ಯಾಯ ಪಾಲಕರು ಜಾತಿ - ಧರ್ಮ, ಬಡವ - ಶ್ರೀಮಂತ ಎಂದು ನೋಡದೆ ಸರ್ವರಿಗೂ ಸಮಾನವಾದ ನ್ಯಾಯವನ್ನು ಒದಗಿಸಿಕೊಡಬೇಕೆಂದು ಹೇಳಿದ ಅವರು,  ಕಾವೇರಿ ನದಿ ವಿವಾದದ ಹೆಸರಿನಲ್ಲಿ ರಾಜ್ಯದ ಜನರ ಆಸ್ತಿ ಪಾಸ್ತಿ, ಪ್ರಾಣ ಹಾನಿಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜನರು ಈ ದೇಶದವರೇ ಆಗಿದ್ದಾರೆ. ಇಲ್ಲಿನ ರಾಜಕೀಯ ಪಕ್ಷದವರ ಡೊಂಬರಾಟದಿಂದ ಬಗೆಹರಿಸಲು ಸಾಧ್ಯವಾಗಬಹುದಾದ ಸಮಸ್ಯೆಗಳನ್ನು ಬಿಗಡಾಯಿಸುವಂತೆ ಮಾಡಿ ತಮ್ಮ ಪಕ್ಷಗಳ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಆದುದರಿಂದ ಇದಕ್ಕೆ ಆದಷ್ಟು ಬೇಗ ಅಂತ್ಯವನ್ನು ಹಾಡಿ ಕರ್ನಾಟಕ ಹಾಗೂ ತಮಿಳುನಾಡಿನ ಜನತೆಯ ನಡುವಿನ ಸಹೋದರತೆಯನ್ನು ಉಳಿಸಿಕೊಳ್ಳುವುದರ ಜತೆಗೆ ರಾಜ್ಯದ ಪ್ರಸಕ್ತ ಸ್ಥಿತಿಗತಿಗಳನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಟ್ಟು ನ್ಯಾಯಯುತ ತೀರ್ಪನ್ನು ಬರುವಂತೆ ಮಾಡಲು ಪ್ರಯತ್ನಿಸಬೇಕೆಂದು  ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News