ಆಧುನಿಕ ಕಾಲದ ಅತ್ಯಂತ ಬಿಸಿ ತಿಂಗಳುಗಳಾಗಿ ಜುಲೈ, ಆಗಸ್ಟ್
ಜಿನೇವ, ಸೆ. 17: ಆಧುನಿಕ ಕಾಲದ ಅತ್ಯಂತ ಬಿಸಿ ತಿಂಗಳಾಗಿ ಆಗಸ್ಟ್ ಜುಲೈಗೆ ಸರಿಗಟ್ಟಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ಅಸಾಧಾರಣ ಉಷ್ಣತೆಯು ನೂತನ ಸಾಮಾನ್ಯ ವಿದ್ಯಮಾನವಾಗುತ್ತಿದೆ ಎಂದು ಅದು ಎಚ್ಚರಿಸಿದೆ. ದಾಖಲಿತ 137 ವರ್ಷಗಳ ಇತಿಹಾಸದಲ್ಲಿ 2016 ಅತ್ಯಂತ ಬಿಸಿ ವರ್ಷವಾಗಲಿದೆ ಎಂಬುದಾಗಿಯೂ ವಿಶ್ವಸಂಸ್ಥೆಯ ಹವಾಮಾನ ಸಂಘಟನೆ (ಡಬ್ಲುಎಂಒ) ಹೇಳಿದೆ. ‘‘2015ರಲ್ಲಿ ದಾಖಲಾದ ಅಸಾಧಾರಣ ಉಷ್ಣತೆಯನ್ನೂ ಮೀರಿ, 2016 ದಾಖಲಿತ ಇತಿಹಾಸದಲ್ಲೇ ಅತ್ಯಂತ ಬಿಸಿಯ ವರ್ಷವಾಗಿ ದಾಖಲಾಗುವ ಸಾಧ್ಯತೆಯಿದೆ’’ ಎಂದು ಸಂಘಟನೆಯ ಮುಖ್ಯಸ್ಥ ಪೆಟ್ಟೇರಿ ಟಾಲಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಈ ಹಿಂದೆ (2014) ಆಗಸ್ಟ್‌ನಲ್ಲಿ ದಾಖಲಾದ ಅತಿ ಹೆಚ್ಚು ಉಷ್ಣತೆಗಿಂತ ಈ ವರ್ಷದ ಸರಾಸರಿ ಆಗಸ್ಟ್ ಉಷ್ಣತೆ 0.16 ಡಿಗ್ರಿಯಷ್ಟು ಹೆಚ್ಚಾಗಿತ್ತು.
ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ ಹಾಗೂ ಎಲ್ ನಿನೊ ಎಂದು ಕರೆಯಲ್ಪಡುವ ಸಾಗರ ಬಿಸಿಯಾಗುವ ವಿದ್ಯಮಾನವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.