ಅಖಿಲೇಶ್‌ರಿಂದಲೇ ಮುಲಾಯಂಗೆ ಪ್ರಧಾನಿ ಪಟ್ಟ ತಪ್ಪಿದ್ದು ಹೇಗೆ ಗೊತ್ತೇ?
ಲಕ್ನೋ, ಸೆ.18: ಉತ್ತರ ಪ್ರದೇಶದಲ್ಲಿ ಯಾದವಿ ಕಲಹ ಮುಗಿದಂತೆ ಕಾಣುತ್ತಿಲ್ಲ. ಮಗನನ್ನೇ ಬಹಿರಂಗವಾಗಿ ಟೀಕಿಸಲು ಹಿಂಜರಿಯದ ಮುಲಾಯಂ ಸಿಂಗ್ ಯಾದವ್, ಶನಿವಾರ ಮಗನಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಶಾಂತಿಸೂತ್ರ ಪ್ರಕಟಿಸಿದ್ದಾರೆ. ಆದರೆ ಅದರ ಬೆನ್ನಲ್ಲೇ ಮಗನ ವಿರುದ್ಧ ಟೀಕಾಪ್ರಹಾರ ನಡೆಸಿ, ಸಹೋದರನ ಬೆನ್ನಿಗೆ ನಿಂತಿದ್ದಾರೆ.
ಸಮಾಜವಾದಿ ಪಕ್ಷಕ್ಕೆ ಬೆಂಬಲ ಗಳಿಸಿಕೊಡುವ ನಿಟ್ಟಿನಲ್ಲಿ ಸಹೋದರ ಶಿವಪಾಲ್ ಯಾದವ್ ನಡೆಸುತ್ತಿರುವ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮುಲಾಯಂ, ರಾಜಕೀಯವಾಗಿ ಪಕ್ಷ ಯಶಸ್ವಿಯಾಗಲು ಅಖಿಲೇಶ್ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. 2012ರ ಚುನಾವಣೆ ಬಳಿಕ ಅಖಿಲೇಶ್‌ಗೆ ಸಿಎಂ ಪಟ್ಟ ನೀಡಲು ಶಿವಪಾಲ್ ವಿರೋಧಿಸಿದ್ದರು. 2014ರ ಲೋಕಸಭೆ ಚುನಾವಣೆ ಬಳಿಕವಷ್ಟೇ ಆ ಪದವಿಗೆ ಅವರನ್ನು ಏರಿಸಬೇಕು ಎನ್ನುವುದು ಅವರ ವಾದವಾಗಿತ್ತು. ಆದರೆ ಕ್ರಮೇಣ ಎಲ್ಲರೂ ಅಖಿಲೇಶ್ ಕಡೆಗೆ ಒಲವು ತೋರಿ ಅವರು ಸಿಎಂ ಆದರು ಎಂದು ವಿವರಿಸಿದ್ದಾರೆ.
"ಅವರು ಸಿಎಂ ಆಗಿ ಏನಾಯಿತು? ಸಮಾಜವಾದಿ ಪಕ್ಷದಿಂದ ಕೇವಲ ಐದು ಮಂದಿ ಗೆದ್ದರು. ನಾನು ಶಿವಪಾಲ್ ಮಾತು ಕೇಳಿದ್ದರೆ, ನಮಗೆ 30-35 ಸ್ಥಾನಗಳು ಬಂದು, ನಾನು ಪ್ರಧಾನಿಯಾಗಿರುತ್ತಿದ್ದೆ" ಎಂದು ತಾವು ಪ್ರಧಾನಿಯಾಗದಿರಲು ಪುತ್ರನೇ ಕಾರಣ ಎಂಬ ಪರೋಕ್ಷ ಆರೋಪ ಮಾಡಿದರು.
"ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಶಿವಪಾಲ್ ಅವರನ್ನು ನೇಮಕ ಮಾಡಿರುವುದರಿಂದ ಅಖಿಲೇಶ್‌ಗೆ ಅಸಮಾಧಾನವಾಗಿದೆ ಎಂದಾದರೆ, ನನ್ನ ಮಗ ಎಂಬ ಕಾರಣಕ್ಕೆ ಅಖಿಲೇಶ್‌ರನ್ನು ಜನ ಸಿಎಂ ಆಗಿ ಒಪ್ಪಿಕೊಂಡರು. ಇಲ್ಲದಿದ್ದರೆ ರಾಜಕೀಯದಲ್ಲಿ ಅವರಿಗೆ ವೈಯಕ್ತಿಕವಾಗಿ ಯಾವ ವರ್ಚಸ್ಸು ಇತ್ತು ಎಂದು ಪ್ರಶ್ನಿಸಿದರು.