ಮುಸ್ಲಿಮರಿಗೆ ಫ್ಲ್ಯಾಟ್ ನೀಡದಂತೆ ನಿರ್ಣಯ ತೆಗೆದುಕೊಂಡ 11 ಮಂದಿಯ ವಿರುದ್ಧ ಪ್ರಕರಣ ದಾಖಲು
ಮುಂಬೈ, ಸೆ.18: ಹದಿನಾರು ಫ್ಲ್ಯಾಟ್‌ಗಳಿರುವ ಇಲ್ಲಿನ ವಸಾಯಿ ಹೌಸಿಂಗ್ ಸೊಸೈಟಿಯ ವಸತಿ ಸಂಕೀರ್ಣದಲ್ಲಿ ವಾಸವಿರುವ ಹನ್ನೊಂದು ಕುಟುಂಬಗಳು, ಈ ಸಂಕೀರ್ಣದಲ್ಲಿ ಮುಸ್ಲಿಮರಿಗೆ ಫ್ಲ್ಯಾಟ್ ನೀಡುವುದನ್ನು ನಿಷೇಧಿಸುವ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮತ್ತು ದ್ವೇಷ ಹಬ್ಬಿಸುವ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ.
ವಿಕಾರ್ ಅಹ್ಮದ್ ಖಾನ್ ಎಂಬವರು ನೀಡಿದ ದೂರಿನ ಮೇರೆಗೆ ಪಾಲ್ಘರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾನು ಫ್ಲ್ಯಾಟ್ ಖರೀದಿಸದಂತೆ ಈ ಹೌಸಿಂಗ್ ಸೊಸೈಟಿ ನಿರ್ಣಯ ಕೈಗೊಂಡಿದೆ ಎಂದು ಆಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಎ) ಹಾಗೂ 298ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಗಾಜಿನ ವ್ಯಾಪಾರಿ ವಿಕಾರ್ ಅಹ್ಮದ್ ಖಾನ್ ಎಂಬವರಿಗೆ ತಮ್ಮ ಫ್ಯ್ಲಾಟ್‌ಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಕಾಂತಾಬೆನ್ ಪಟೇಲ್ ಹಾಗೂ ಅವರ ಮನ ಜಿಗ್ನೇಶ್ ಪಟೇಲ್ ಎಂಬವರಿಗೆ ಹ್ಯಾಪಿ ಜೀವನ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ಈ ಹನ್ನೊಂದು ಮಂದಿ, ನಿರ್ಣಯ ಕಳುಹಿಸಿಕೊಟ್ಟು ಫ್ಲ್ಯಾಟ್ ಮಾರಾಟ ಮಾಡದಂತೆ ಸೂಚಿಸಿದ್ದರು.
710 ಚದರ ಅಡಿಯ ಸಿಂಗಲ್ ಬೆಡ್‌ರೂಂ ಫ್ಲ್ಯಾಟನ್ನು ಖಾನ್ ಅವರಿಗೆ ಮಾರಾಟ ಮಾಡುವ ಬಗ್ಗೆ ಒಪ್ಪಂದವಾಗಿದ್ದು, ಒಂದು ಲಕ್ಷ ರೂಪಾಯಿ ಮುಂಗಡ ಹಣ ಕೂಡಾ ಪಡೆದಿದ್ದು, 47 ಲಕ್ಷಕ್ಕೆ ಮಾರಾಟ ಮಾಡಲು ನಿರ್ಧರಿಸಲಾಗಿತ್ತು.