ಹರ್ಯಾಣ ಘನ ಮುಖ್ಯಮಂತ್ರಿಗೆ ಗ್ಯಾಂಗ್‌ರೇಪ್ ಕ್ಷುಲ್ಲಕ ವಿಷಯವಂತೆ!
ಚಂಡಗಡ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅವಳಿ ಕೊಲೆ, ಮುಸ್ಲಿಂ ಸಹೋದರಿಯರಿಬ್ಬರ ಮೇಲೆ ನಡೆದ ಗ್ಯಾಂಗ್‌ರೇಪ್ ಹಾಗೂ ಪೊಲೀಸರು ಮೇವಾಟ್ ಬಿರಿಯಾನಿಗೆ ಕೈ ಹಾಕಿರುವುದು ತೀರಾ ಸಣ್ಣ ವಿಷಯಗಳು ಎಂದು ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೇಳಿದ್ದಾರೆ.
ಹರ್ಯಾಣದ 50ರ ಸಂಭ್ರಮಾಚರಣೆಗೆ ಆಗಮಿಸಿದ ಮುಖ್ಯಮಂತ್ರಿಯನ್ನು ಮೇವಾಟ್ ಗ್ಯಾಂಗ್‌ರೇಪ್ ಬಗೆಗಿನ ಸಿಬಿಐ ವಿಚಾರಣೆ ಹಾಗೂ ಬೀಫ್ ವಿವಾದದ ಬಗ್ಗೆ ಪ್ರಶ್ನಿಸಿದಾಗ, "ಇವೆಲ್ಲ ವಿಷಯಗಳೇ ಅಲ್ಲ; ಇಂಥ ಸಣ್ಣ ವಿಚಾರಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂದು ನಾವು ಸ್ವರ್ಣಜಯಂತಿ ಬಗ್ಗೆ ಮಾತನಾಡಬೇಕು" ಎಂದು ಹೇಳಿದರು.
ಮತ್ತೆ ಆ ಬಗ್ಗೆ ಕೇಳಿದಾಗ, "ಸುವರ್ಣ ಸಂಭ್ರಮಕ್ಕೆ ಹೋಲಿಸಿದರೆ ಇವು ತೀರಾ ಕ್ಷುಲ್ಲಕ ವಿಚಾರಗಳು. ದೇಶದ ಇತರೆಡೆಯೂ ಇಂಥ ಘಟನೆಗಳು ಸಂಭವಿಸುತ್ತವೆ" ಎಂದರು. ಮೇವಾಟ್‌ನಲ್ಲಿ ಆಗಸ್ಟ್ 24ರಂದು 20 ವರ್ಷದ ಮುಸ್ಲಿಂ ಮಹಿಳೆ ಹಾಗೂ 14 ವರ್ಷದ ಆಕೆಯ ಸಂಬಂಧಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅವರ ಅತ್ತೆ- ಮಾವನನ್ನು ಹೊಡೆದು ಸಾಯಿಸಿ ಈ ಕೃತ್ಯ ಎಸಗಿದ್ದರು.
ಗೋಮಾಂಸ ಸೇವಿಸಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗುತ್ತಿರುವುದಾಗಿ ಅತ್ಯಾಚಾರಿಗಳು ಹೇಳಿದ್ದಾಗಿ ಸಂತ್ರಸ್ತ ಯುವತಿಯರು ಬಹಿರಂಗಪಡಿಸಿದ್ದರು.