ಇಂದು ಆಗಮಿಸಬೇಕಿದ್ದ ಹಜ್ಜಾಜ್‌ಗಳ ಪ್ರಥಮ ವಿಮಾನಯಾನ ವಿಳಂಬ
ಮಂಗಳೂರು, ಸೆ.18: ಏರ್ ಇಂಡಿಯಾದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಬೇಕಿದ್ದ ಹಜ್ಜಾಜ್‌ಗಳ ಪ್ರಥಮ ತಂಡದ ಯಾನವು ನಿಗದಿತ ಅವಧಿಗಿಂತ ಭಾರೀ ವಿಳಂಬವಾಗಲಿದೆ ಎಂದು ಅಧಿತೃಕ ಮೂಲಗಳು ತಿಳಿಸಿವೆ.
ಮಂಗಳೂರು ವಿಮಾನ ನಿಲ್ದಾಣದಿಂದ ಕೇಂದ್ರ ಹಜ್ ಸಮಿತಿ ವತಿಯಿಂದ ಈ ಸಾಲಿನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡವರ ಪೈಕಿ ಪ್ರಥಮ ತಂಡ ಇಂದು ಅಪರಾಹ್ನ 2:45ಕ್ಕೆ ಆಗಮಿಸಬೇಕಿತ್ತು. ಆದರೆ ಇದು ಸಂಜೆ 6:30ರ ಸುಮಾರಿಗೆ ತಲುಪುವ ಸಾಧ್ಯತೆಯಿದೆ. ನಿಗದಿತ ಅವಧಿಯಲ್ಲಿ ವಿಮಾನ ಹೊರಡದಿರುವುದೇ ಈ ವಿಳಂಬಕ್ಕೆ ಕಾರಣ. ಪ್ರಸ್ತುತ ಜಿದ್ದಾದಿಂದ ಹಜ್ಜಾಜ್‌ಗಳನ್ನು ಒಳಗೊಂಡ ವಿಮಾನವು ಶಾರ್ಜಾ ತಲುಪಿದೆ. ಅಲ್ಲಿಂದ ಹೊರಟು ಸಂಜೆ 6:30ರ ಸುಮಾರಿಗೆ ಮಂಗಳೂರು ತಲುಪಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಥಮ ತಂಡದಲ್ಲಿ 152 ಮಂದಿ ಹಜ್ಜಾಜ್‌ಗಳಿರಲಿದ್ದಾರೆ.
ಹಾಜಿಗಳನ್ನೊಳಗೊಂಡ ಎರಡನೆ ತಂಡ, ಸೆಪ್ಟಂಬರ್ 19ರಂದು ಪೂರ್ವಾಹ್ನ 11: 05ಕ್ಕೆ ಆಗಮಿಸಲಿದೆ. ಇದರಲ್ಲಿ 154 ಮಂದಿ ಇರಲಿದ್ದಾರೆ. ಸೆ.20ರಂದು ಮಧ್ಯಾಹ್ನ 12:15ಕ್ಕೆ 152 ಮಂದಿ ಹಾಜಿಗಳನ್ನೊಳಗೊಂಡ ಮೂರನೆ ತಂಡ ಹಾಗೂ ಕೊನೆಯ ತಂಡ ಸೆ.21ರಂದು ಬೆಳಗ್ಗೆ 9:55ಕ್ಕೆ 152 ಮಂದಿ ಹಜ್ಜಾಜ್‌ಗಳನ್ನೊಳಗೊಂಡು ಮಂಗಳೂರು ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.