ಮೆಡಿಕಲ್ ಕಾಲೇಜು ಸೀಟು ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ: ಇಬ್ಬರು ಪೊಲೀಸ್ ಬಲೆಗೆ
ಮಂಗಳೂರು, ಸೆ.18: ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡುವುದಾಗಿ ವಿದ್ಯಾರ್ಥಿಗಳಿಂದ ಕೋಟ್ಯಂತರ ರೂ. ಹಣವನ್ನು ಸಂಗ್ರಹಿಸಿ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ ತಿಳಿಸಿದ್ದಾರೆ.
ತಮಿಳುನಾಡಿನ ಈರೋಡ್ ನಿವಾಸಿ ಸಂಜೀವಕುಮಾರ್ ಆರ್.(45) ಮತ್ತು ಮಡಿಕೇರಿ ನಿವಾಸಿ ಬಿ.ಸಿ.ತಿಮ್ಮಯ್ಯ(34) ಬಂಧಿತ ಆರೋಪಿಗಳು.
ಆರೋಪಿಗಳಿಬ್ಬರು ತಮಿಳುನಾಡಿನ ವಿದ್ಯಾರ್ಥಿಗಳನ್ನು ಮಂಗಳೂರಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಪ್ರತಿಯೊಬ್ಬರಿಂದ ಸುಮಾರು 20 ಲಕ್ಷ ರೂ ವರೆಗೆ ಹಣವನ್ನು ಪಡೆದಿದ್ದರು. ಈ ಬಗ್ಗೆ ತಮಿಳುನಾಡಿನ 7 ವಿದ್ಯಾರ್ಥಿಗಳು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದಾಗ ಇವರು ಸುಮಾರು 16 ಮಂದಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 16 ವಿದ್ಯಾರ್ಥಿಗಳಿಂದ 2.82 ಕೋಟಿ ರೂ. ಪಡೆದು ವಂಚಿಸಿದ್ದಾರೆ .ಈ ಆರೋಪಿಗಳಿಂದ 37.50 ಲಕ್ಷ ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಈ ರೀತಿ ಮಧ್ಯವರ್ತಿಗಳ ಮುಖಾಂತರ ವೈದ್ಯಕೀಯ ಸೀಟು ಪಡೆಯುವ ಮೋಸದ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಂಡು ವಿದ್ಯಾರ್ಥಿಗಳು ಭವಿಷ್ಯ ಹಾಳು ಮಾಡಿಕೊಳ್ಳದಂತೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಅವರು ತಿಳಿಸಿದರು.
ಕಳೆದ ವರ್ಷದಲ್ಲಿ ಸೀಟು ಕೊಡಿಸುವುದಾಗ ವಂಚಿಸಿದ ಮೂರು ಪ್ರಕರಣಗಳು ದಾಖಲಾಗಿತ್ತು. ಈ ರೀತಿ ವಂಚನೆಗೈಯುವವರ ಭಾವಚಿತ್ರವನ್ನು ಸೋಮವಾರ ವೆಬ್‌ಸೈಟ್ ನಲ್ಲಿ ಪ್ರಕಟಪಡಿಸುತ್ತೇವೆ. ಈ ಬಗ್ಗೆ ಜಾಗೃತಿಗಾಗಿ ಕಾಲೇಜಿನಲ್ಲಿಯೂ ಆರೋಪಿಗಳ ಭಾವಚಿತ್ರಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ್ ಎಂ. ಪಾಟೀಲ್ ಉಪಸ್ಥಿತರಿದ್ದರು.