ಕಾವೇರಿ ಜಲವಿವಾದ: ಸೌಹಾರ್ದಯುತವಾಗಿ ಬಗೆಹರಿಯಲು ಪೂಜಾರಿಯಿಂದ ಉರುಳುಸೇವೆ
ಮಂಗಳೂರು, ಸೆ.18: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಮೂರು ರಾಜ್ಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ನ್ಯಾಯಾಲಯದ ತೀರ್ಪು ಬರಲಿ ಎಂದು ಆಶಿಸಿ ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿಯವರು ಇಂದು ಕುದ್ರೋಳಿ ಗೋಕರ್ಣಾಥೇಶ್ವರ ಕ್ಷೇತ್ರದಲ್ಲಿ ಉರುಳು ಸೇವೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಉರುಳು ಸೇವೆ ರಾಜಕೀಯ ಉದ್ದೇಶದಿಂದ ಮಾಡಿರುವುದಲ್ಲ. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ನ್ಯಾಯಾಲಯವು ಮೂರೂ ರಾಜ್ಯಗಳ ಜನತೆಗೆ ಅನ್ಯಾಯವಾಗದ ರೀತಿಯಲ್ಲಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ. ಇದಕ್ಕೆ ವ್ಯತಿರಿಕ್ತ ತೀರ್ಪು ಬಂದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ.ಒಂದು ರಾಜ್ಯದ ವಿರುದ್ಧ ಇನ್ನೊಂದು ರಾಜ್ಯಕ್ಕೆ ವೈಮನಸ್ಸು ಉಂಟಾಗುವಂತೆ ಮಾಡುತ್ತದೆ. ಇದು ಒಕ್ಕೂಟ ತತ್ವಕ್ಕೆ ಅಪಾಯಕಾರಿ. ನ್ಯಾಯಾಧೀಶರೂ ಮನುಷ್ಯರೇ. ಯಾರಿಗೂ ತೊಂದರೆ ಆಗದಂತೆ ತೀರ್ಪು ನೀಡುವ ಶಕ್ತಿ ಭಗವಂತ ಅವರಿಗೆ ಕರುಣಸಲಿ ಎಂದು ಪ್ರಾರ್ಥಿಸಿ ಉರುಳು ಸೇವೆ ಮಾಡಿರುವುದಾಗಿ ತಿಳಿಸಿದರು.
ಕಾವೇರಿ ವಿವಾದಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯವರ ಮೇಲೆ ಮಹತ್ತರ ಜವಾಬ್ದಾರಿ ಇದೆ. ಅಧಿಕಾರ ಮುಖ್ಯ ಅಲ್ಲ, ಗಂಭೀರ ನಿರ್ಧಾರಗಳ ಮೂಲಕ ದೇಶದ ಚರಿತ್ರೆಯಲ್ಲಿ ಸ್ಥಾನ ಗಳಿಸುವ ಸುವರ್ಣ ಅವಕಾಶ ಸಿದ್ದರಾಮಯ್ಯ ಅವರ ಮುಂದಿದೆ ಎಂದರು.
ಈ ಸಂದರ್ಭ ಶಾಸಕ ಜೆ.ಆರ್.ಲೋಬೊ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ,ಮನಪಾ ಸದಸ್ಯರು, ಎತ್ತಿನಹೊಳೆ ಹೋರಾಟಗಾರರು, ಕಾಂಗ್ರೆಸ್ ಕಾರ್ಯಕರ್ತರು, ದೇವಳದ ಭಕ್ತರು ಉಪಸ್ಥಿತರಿದ್ದರು.