×
Ad

ಬಂಟ್ವಾಳ ಪಿಎಫ್‌ಐಯಿಂದ ‘ದ್ವೇಷ ರಾಜಕೀಯ ನಿಲ್ಲಿಸಿ’ ಅಭಿಯಾನಕ್ಕೆ ಚಾಲನೆ

Update: 2016-09-18 15:50 IST

ಬಂಟ್ವಾಳ, ಸೆ.18: ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ‘ದ್ವೇಷ ರಾಜಕೀಯ ನಿಲ್ಲಿಸಿ’ ಅಭಿಯಾನದ ಅಂಗವಾಗಿ ಬಂಟ್ವಾಳ ತಾಲೂಕಿನಾದ್ಯಂತ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಇಂದು ಫರಂಗಿಪೇಟೆಯಲ್ಲಿ ನಡೆಯಿತು.

ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಕಲ್ಲಡ್ಕ ‘ದ್ವೇಷ ರಾಜಕೀಯ ನಿಲ್ಲಿಸಿ ಅಭಿಯಾನ’ದ ಬಂಟ್ವಾಳ ತಾಲೂಕು ಸಂಚಾಲಕ ಫಾರೂಕ್ ಮೆಲ್ಕಾರ್‌ರಿಗೆ ಸಂಘಟನೆಯ ಧ್ವಜ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ದೇಶದ ದಲಿತರು, ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ. ಗೋವಿನ ಹೆಸರಿನಲ್ಲಿ ದಲಿತರು, ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆಗಳನ್ನು ತಡೆಯಲು ಸಾಧ್ಯವಾಗದ ಕೇಂದ್ರ ಮತ್ತು ರಾಜ್ಯ ಸರಕಾರ ಮೊಸಲೆ ಕಣ್ಣೀರು ಸುರಿಸುತ್ತಾ ಜನರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಡಿಸಿದರು.

ತಾರತಮ್ಯ, ಭಯ, ಹಸಿವಿನಿಂದ ಸ್ವಾತಂತ್ರ ನೀಡಿ ಎಂದು ಭಾಷಣ ಮಾಡಿದ ಮಾತ್ರಕ್ಕೆ ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದಂತಹ ಪ್ರಕರಣ ದಾಖಲಿಸಿ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಕಾಶ್ಮೀರದ ಜನರ ಮೇಲೆ ಸೈನಿಕರು ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡ ಜಾಗತಿಕ ಮಾನವ ಹಕ್ಕು ಸಂಘಟನೆಯ ವಿರುದ್ಧವೂ ದೇಶದ್ರೋಹ ಆರೋಪ ಹೊರಿಸಿ ಪ್ರಕರಣ ದಾಖಲಿಸುವ ಮೂಲಕ ದ್ವೇಷ ರಾಜಕೀಯ ಮಾಡಲಾಗುತ್ತಿದೆ. ಇಂತಹ ಘಟನೆಗಳು ದೇಶದ ಜಾತ್ಯತೀತ ಸಂವಿಧಾನದ ಭದ್ರತೆಗೆ ಮಾರಕವಾಗಿದೆ ಎಂದವರು ಹೇಳಿದರು.

ಇದೇ ವೇಳೆ ಬೀದಿ ನಾಟಕದ ಮೂಲಕ ದೇಶದಲ್ಲಿ ದಲಿತರು, ಮುಸ್ಲಿಮರು, ದುರ್ಬಲ ವರ್ಗಗಳ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ದೌರ್ಜನ್ಯಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

ವೇದಿಕೆಯಲ್ಲಿ ಪಿಎಫ್‌ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸಲೀಂ ಕುಂಪನಮಜಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News