9 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಆರೋಪಿ
ಕಾಸರಗೋಡು, ಸೆ.18: 9 ವರ್ಷಗಳ ಹಿಂದೆ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಒಂಬತ್ತು ವರ್ಷ ಕಳೆದರೂ ಹಂತಕನನ್ನು ಪತ್ತೆಹಚ್ಚಲಾಗಿಲ್ಲ. ಇದು ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮಧೂರು ಚಟ್ಟಂಗುಯಿಯ ದಾಮೋದರ (50) ಆರೋಪಿಯಾಗಿದ್ದು, ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ಚೆರ್ಕಳ ಪಾಡಿ ಕೊಳಚ್ಚಿಯಡ್ಕದ ಜಾನಕಿ (37) ಕೊಲೆಗೀಡಾದ ಮಹಿಳೆ. 2007ರಲ್ಲಿ ಘಟನೆ ನಡೆದಿತ್ತು. ಮಹಿಳೆಯನ್ನು ಕತ್ತು ಹಿಸುಕಿ ಕೊಲೆಗೈಯಲಾಗಿತ್ತು. 2007ರ ಜನವರಿ 29 ರಂದು ಬೆಳಗ್ಗೆ ಚೆರ್ಕಳ ಗೋಳಿಕಟ್ಟೆ ಎಂಬಲ್ಲಿನ ಖಾಸಗಿ ವ್ಯಕ್ತಿಯೋರ್ವರ ಪಂಪ್ ಶೆಡ್ ಬಳಿ ಮೃತದೇಹ ಪತ್ತೆಯಾಗಿತ್ತು. ಜ. 28 ರಂದು ಸಂಜೆ ಕೊಲೆ ನಡೆದಿತ್ತು ಎಂದು ತನಿಖೆಯಿಂದ ಸ್ಪಷ್ಟಗೊಂಡಿತ್ತು.
ಮೃತಪಟ್ಟ ಮಹಿಳೆಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಪತ್ರಿಕೆಗಳಲ್ಲಿ ಬಂದ ಮಹಿಳೆಯ ಮೃತದೇಹದ ಭಾವಚಿತ್ರ ಗಮನಿದ ಪುತ್ರಿ ತಾಯಿಯ ಗುರುತನ್ನು ಪತ್ತೆಹಚ್ಚಿದ್ದಳು. ಜಾನಕಿಯ ಪತಿ ಈ ಹಿಂದೆಯೇ ಮೃತಪಟ್ಟಿದ್ದರು. ದಾಮೋದರನ್ 2001ರಲ್ಲೇ ಪತ್ನಿ ಮಕ್ಕಳನ್ನು ತೊರೆದು ಚೆರ್ಕಳದಲ್ಲಿರುವ ಬಾಡಿಗೆ ಕ್ವಾಟಸರ್‌ನಲ್ಲಿ ವಾಸಿಸುತ್ತಿದ್ದು ಈ ಸಂದರ್ಭದಲ್ಲಿ ಜಾನಕಿಯ ಪರಿಚಯವಾಗಿತ್ತು ಎನ್ನಲಾಗಿದೆ. ಇವರ ಸಂಬಂಧದ ಬಗ್ಗೆ ಪೊಲೀಸರಿಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಲಿಲ್ಲ. ಅತ್ಯಾಚಾರ ನಡೆದಿಲ್ಲ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು. ಜಾನಕಿಯ ವಸ್ತ್ರವನ್ನು ಕ್ವಾಟಸರ್ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಜ.28 ರಂದು ಸಂಜೆ 6:45 ರ ಸುಮಾರಿಗೆ ದಾಮೋದರ ಕ್ವಾಟಸರ್‌ನಿಂದ ಹೊರಗಡೆ ತೆರಳುತ್ತಿರುವುದನ್ನು ಗಮನಿಸಿದ ಕೆಲ ಕಾರ್ಮಿಕರು ವಿಚಾರಿಸಿದಾಗ ಪ್ರವಾಸಕ್ಕೆ ತೆರಳುವುದಾಗಿ ಹೇಳಿದ್ದನೆನ್ನಲಾಗಿದೆ. ಮರುದಿನ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಜಾನಕಿಯ ಸರವು ದಾಮೋದರ ವಾಸಿಸುತ್ತಿದ್ದ ಕ್ವಾಟಸರ್ ನಲ್ಲಿ ಪತ್ತೆಯಾಗಿತ್ತು.
ಈತನಿಗಾಗಿ ಪೊಲೀಸರು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮೊದಲಾದೆಡೆ ತನಿಖೆ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳನ್ನು ಬೇಧಿಸಿದ್ದರೂ ಈ ಪ್ರಕರಣ ಪೊಲೀಸರಿಗೆ 9 ವರ್ಷಗಳಿಂದ ಸವಾಲಾಗಿ ಪರಿಣಮಿಸಿದೆ. ಕಾಸರಗೋಡು ನಗರ ಠಾಣಾ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ . ಇದೀಗ ಆರೋಪಿಯ ಪತ್ತೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಿದ್ದಾರೆ. ನೋಟೀಸನ್ನು ಸಾರ್ವಜನಿಕ ಸ್ಥಳಗಳಲ್ಲಿ ಲಗತ್ತಿಸಲಾಗಿದೆ.