ನೀರಿನ ಸಂರಕ್ಷಣೆಯ ಜಾಗೃತಿ ಅವಶ್ಯ : ಡಾ.ಶ್ರೀಶ ಕುಮಾರ್
ಮೂಡುಬಿದಿರೆ, ಸೆ.18: ಮನುಷ್ಯನ ಬದುಕಿನಲ್ಲಿ ಹುಟ್ಟಿನಿಂದ ಚಟ್ಟದವರೆಗೂ ನೀರು ಬಹಳ ಅವಶ್ಯ. ನೀರನ್ನು ಇಂಗಿಸಲು ಗಿಡಮರಗಳನ್ನು ನೆಡುವುದು, ಇಂಗುಗುಂಡಿಗಳನ್ನು ನಿರ್ಮಿಸುವುದು, ಬೋರ್‌ವೆಲ್‌ಗಳ ಮರುಪೂರಣ, ನಿರ್ಜೀವ ಕೆರೆ ಬಾವಿ, ಮದಕಗಳನ್ನು ಜೀರ್ಣೋದ್ಧಾರಗೊಳಿಸುವುದು ಹಾಗೂ ಮಳೆ ನೀರನ್ನು ಸಂಗ್ರಹಣೆ ಹಾಗೂ ಜಾಗೃತಿಯಿಂದ ನೀರಿನ ಸಂರಕ್ಷಣೆ ಸಾಧ್ಯ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಹೇಳಿದರು.
ಅವರು ಜಲಭಾರತಿ ಬೆಂಗಳೂರು, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್, ಪ್ರೇರಣಾ ಸೇವಾ ಟ್ರಸ್ಟ್ ಮೂಡುಬಿದಿರೆ (ರಿ) ಮತ್ತು ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರ ನಿ, ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಜಲಸಂರಕ್ಷಣೆ-ಯಾಕೆ ? ಹೇಗೆ ಎಂಬ ಏಕದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಸುಮಾರು 120 ರಷ್ಟು ದೊಡ್ಡ ನದಿಗಳು ಹರಿಯುತ್ತಿದ್ದರೂ ಮಲಿನಗೊಂಡಿರುವುದರಿಂದ ಕುಡಿಯಲು ನೀರಿಲ್ಲದಂತಾಗಿದೆ. ರಾಜ್ಯದಲ್ಲಿ 40,000ರಷ್ಟು ಕೆರೆಗಳಿದ್ದು ಅವುಗಳಲ್ಲಿ ಕೆಲವು ಕೆರೆಗಳು ಅತಿಕ್ರಮಣಗೊಂಡಿರುವುದರಿಂದ 12,000 ಕೆರೆಗಳು ಮಾತ್ರ ಉಳಿದಿವೆ. ಇಸ್ರೇಲ್‌ನಂತಹ ದೇಶದಲ್ಲಿ ಎಷ್ಟೇ ಮಳೆಬಿದ್ದರೂ ಒಂದು ಹನಿ ನೀರನ್ನು ವ್ಯರ್ಥ ಮಾಡದೆ ನೀರನ್ನು ಸಂರಕ್ಷಿಸಿ ವ್ಯಯಿಸುತ್ತಿದ್ದಾರೆ. ಇಂತಹ ಜಾಗೃತಿ ನಮ್ಮಲ್ಲೂ ಮಾಡಬೇಕಾಗಿದೆ ಎಂದು ತಿಳಿಸಿದರು.
ಬಿಲ್ಲವ ಸಂಘದ ಅಧ್ಯಕ್ಷ ಪೂವಪ್ಪಕುಂದರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಜಗದೀಶ ಬಾಳ ಮಾತನಾಡಿ ಅಭಿವೃದ್ಧಿಯ ನೆಪದಲ್ಲಿ ನಮ್ಮ ಊರಿನಲ್ಲಿರುವ ಕೆರೆಗಳನ್ನು ನಾಶ ಮಾಡಿ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಜಲಮೂಲವನ್ನು ನಾಶಗೊಳಿಸಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ನಮ್ಮ ಮನೋಭಾವನೆಗಳು ಬದಲಾವಣೆಯಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಪ್ರೇರಣಾ ಸೇವಾ ಟ್ರಸ್ಟ್ ಮೂಡುಬಿದಿರೆ (ರಿ) ಮತ್ತು ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಎಂಐಟಿಯ ಡಾ.ನಾರಾಯಣ ಶೆಣೈ, ಕೃಷಿಕ ಪ್ರವೀಣ ಸರಳಾಯ ಪುಣಚ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಉಪನ್ಯಾಸಕ ಹರೀಶ್ ಸ್ವಾಗತಿಸಿದರು. ಕೇಶವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಟೆಂಪಲ್ ಟೌನ್‌ನ ಅಧ್ಯಕ್ಷ ರಾಜೇಶ್ ಬಂಗೇರಾ ವಂದಿಸಿದರು.