×
Ad

ಯೋಧ ಏಕನಾಥ ಶೆಟ್ಟಿಯವರ ಮನೆಗೆ ಸೇನಾ ಅಧಿಕಾರಿ ಭೇಟಿ

Update: 2016-09-18 19:30 IST

ಬೆಳ್ತಂಗಡಿ, ಸೆ.18: ಬಂಗಾಲ ಕೊಲ್ಲಿಯಲ್ಲಿ ನಾಪತ್ತೆಯಾಗಿದ್ದ ಸೇನಾ ವಿಮಾನದಲ್ಲಿದ್ದ ಗುರುವಾಯನಕರೆ ಬಳಿ ನಿವಾಸಿ ಯೋಧ ಏಕನಾಥ ಶೆಟ್ಟಿ ಅವರ ನಿವಾಸಕ್ಕೆ ಸೇನೆಯ ಡಿಫೆನ್ಸ್ ಸೆಲ್‌ನ ಕಣ್ಣೂರಿನ ಅಧಿಕಾರಿ ಸುರೇಶ್ ಶೆಟ್ಟಿ ರವಿವಾರ ಭೇಟಿ ನೀಡಿದರು.

ಏಕನಾಥ ಶೆಟ್ಟಿಯವರಿಗೆ ಸಂಬಂಧಪಟ್ಟ, ಮನೆಗೆ ಸಂಬಂಧಪಟ್ಟ ವಿವಿಧ ದಾಖಲಾತಿ ಪತ್ರಗಳನ್ನು ಸಂಗ್ರಹಿಸುವುದಕ್ಕೋಸ್ಕರ ಅವರು ಬಂದಿದ್ದು, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಂಡರಲ್ಲದೆ ಇನ್ನೂ ಅನೇಕ ದಾಖಲೆಗಳನ್ನು ಸಂಗ್ರಹಿಸಿಡಲು ಮನೆಯವರಿಗೆ ತಿಳಿಸಿದರು. ಅಲ್ಲದೆ ಅವರು ಏಕನಾಥ ಶೆಟ್ಟಿ ಹುಟ್ಟೂರು ಮಂಗಳೂರು ಬಳಿಯ ಕುತ್ತಾರ್‌ಗೆ ತೆರಳಿ ಅಲ್ಲಿಯೂ ಬೇಕಾದ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಸೇನೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಅದನ್ನು ಸೇನಾ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು. ಬಳಿಕ ನ್ಯಾಯಾಲಯದ ತೀರ್ಮಾನದಂತೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದು. ಈ ಮಧ್ಯೆ ಸಮುದ್ರದಲ್ಲಿ ಹುಡುಕಾಟ ಮುಂದುವರಿಯುತ್ತಿದೆ. ಇದುವರೆಗೆ ವಿಮಾನದಲ್ಲಿದ್ದ 29 ಯೋಧರ ಅಥವಾ ವಿಮಾನದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಹುಡುಕಾಟದಲ್ಲಿ ಏನಾದರೂ ತುಣುಕು ಸಿಕ್ಕಿದರೂ ಅದನ್ನು ಸಕಲ ಸೇನಾ ಮರ್ಯಾದೆಗಳೊಡನೆ ತರಲಾಗುವುದು. ಅಕಸ್ಮಾತ್ ಸಿಗದಿದ್ದಲ್ಲಿ ಮೃತ ಯೋಧರಿಗೆ ಸಂಬಂಧಪಟ್ಟ ಬಟ್ಟೆ ಇತ್ಯಾದಿ ವಸ್ತುಗಳನ್ನು ಸೇನೆಯ ಕ್ರಮದಂತೆ ಹೇಗೆ ಪಾರ್ಥಿವ ಶರೀರ ತಂದು ಮನೆಯವರಿಗೆ ತಂದು ಒಪ್ಪಿಸುತ್ತಾರೋ ಅಂತೆಯೇ ತಂದು ತಹಸೀಲ್ದಾರರ ಸಮ್ಮುಖದಲ್ಲಿ ಮನೆಯವರಿಗೆ ಹಸ್ತಾಂತರಿಸಲಾಗುವುದು. ಅಂದೇ ಮರಣಪತ್ರವನ್ನು ಹಾಗೂ ನೀಡಬೇಕಾಗಿರುವ ಪರಿಹಾರಗಳ ದಾಖಲೆಗಳನ್ನೂ ಹಸ್ತಾಂತರಿಸಲಾಗುವುದು. ಇಷ್ಟೆಲ್ಲಾ ಆಗಲು ಸರಿ ಸುಮಾರು ಇನ್ನೂ ಮೂರು ತಿಂಗಳು ಬೇಕಾಗಬಹುದು ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News