ನ್ಯಾಯಕ್ಕಾಗಿ ಅಹಿಂದ ಚಳುವಳಿಯ ಅಗತ್ಯ ಬಹಳಷ್ಟಿದೆ: ಬಿ.ಎಂ. ಹನೀಫ್
ಕೊಣಾಜೆ, ಸೆ.18: ಏಕತೆಯ ಹೋರಾಟಕ್ಕೆ ಮಹತ್ವ ಬಹಳಷ್ಟಿದೆ. ಜಾತಿ, ಧರ್ಮ ಎನ್ನದೇ ಒಗ್ಗಟ್ಟಿನಿಂದ ನ್ಯಾಯಪರ ಹೋರಾಟಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಅಹಿಂದ ಜನ ಚಳುವಳಿಯ ಕಾರ್ಯ ಬಹಳಷ್ಟು ಅಗತ್ಯತೆ ಇದೆ. ಒಂದು ಕಾಲದಲ್ಲಿ ಮುಸ್ಲಿಮರು ದಲಿತರೊಂದಿಗೆ ಸೇರಿಕೊಂಡರೆ ಮುಸ್ಲಿಮರನ್ನೇ ವಕ್ರಕಣ್ಣಿನಲ್ಲಿ ನೋಡುವ ಪರಿಸ್ಥಿತಿ ಇತ್ತು. ಪ್ರತಿಯೊಂದು ವಿಚಾರದಲ್ಲೂ ದಲಿತರನ್ನು ದೂರ ಮಾಡುವ ಪರಿಸ್ಥಿತಿ ಎಲ್ಲೆಡೆ ಇತ್ತು. ಈ ಸಮಸ್ಯೆಗೆ ಪರಿಹಾರವಾಗಿಅಹಿಂದ ಜನ ಚಳುವಳಿ ಮಾಡಲಾಯಿತು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎಂ. ಹನೀಫ್ ಹೇಳಿದರು.
ಅವರು ಮುಡಿಪುವಿನಲ್ಲಿ ರವಿವಾರ ಅಹಿಂದ ಜನ ಚಳವಳಿ ಆಶ್ರಯದಲ್ಲಿ ನಡೆದ ಬ್ಲಾಕ್ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೋಮು ಸಂಘರ್ಷ ನಡೆದ ಸಂದರ್ಭ ಮೊಗವೀರರನ್ನು ಎತ್ತಿಕಟ್ಟಲಾಗುತ್ತಿತ್ತು. ಪ್ರಸಕ್ತ ಒಳ್ಳೆಯ ವಿದ್ಯಾಭ್ಯಾಸದಿಂದ ಎಲ್ಲರ ಜತೆ ಸೇರಿ ಒಗ್ಗಟ್ಟಾಗಿ ಹೋಗುತ್ತಿರುವುದು ಸ್ವಾಗತಾರ್ಹ. ಕೋಮುವನ್ನು ಬದಿಗಿಟ್ಟು ಮೊಗವೀರರ, ದಲಿತರ, ಮುಸ್ಲಿಮರ ಮನಸ್ಸು ಏಕತೆಯತ್ತ ಸಾಗುತ್ತಿದೆ. ಒಗ್ಗಟ್ಟೇ ನಮ್ಮ ಜೀವಾಳ. ಭಾಷೆ, ಸಾಹಿತ್ಯ, ಧರ್ಮ ಹಲವು ಇದ್ದರೂ ನಮ್ಮ ಹೋರಾಟ ಒಮ್ಮತದಿಂದ ನಡೆದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.
ಅಹಿಂದ ದ.ಕ.ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಹಿಂದಾ ಕಾರ್ಯಾಧ್ಯಕ್ಷ ಪದ್ಮನಾ ನರಿಂಗಾನ ಪ್ರಾಸ್ತಾವಿಕವಾಗಿ ಮಾತನಾಡಿದರು.
ದ.ಕ. ಜಿಲ್ಲಾ ಅಹಿಂದ ಜನ ಚಳವಳಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಫೆಡ್ರಿಕ್ ಡಿಸೋಜ, ವೃಂದಾ ಮೇರಮಜಲು, ದಿನೇಶ್, ನಾರ್ಯ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಭಾಸ್ಕರ, ಸಂಚಾಲಕ ಕೆ.ಎಚ್. ಮುಹಮ್ಮದ್, ಇಬ್ರಾಹೀಂ ನಡುಪದವು, ಅಬು ಸಮೀರ್ ಪಜೀರ್ ಮೊದಲಾದವರು ಉಪಸ್ಥಿತರಿದ್ದರು. ಅಹಿಂದ ಕಾರ್ಯದರ್ಶಿ ಯೂಸುಫ್ ವಕ್ತಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.