ಸಿರಿಯ ಸೇನೆ ಮೇಲೆ ಅಮೆರಿಕ ವಿಮಾನ ದಾಳಿ : ಸೇನೆ ಆರೋಪ
ಬೆರುತ್, ಸೆ. 18: ಅಮೆರಿಕ ನೇತೃತ್ವದ ಮಿತ್ರಪಡೆಯ ಯುದ್ಧ ವಿಮಾನಗಳು ಡಯರ್ ಅಲ್-ರೊರ್ ವಿಮಾನ ನಿಲ್ದಾಣದ ಸಮೀಪದ ಜೆಬೆಲ್ ತಾರ್ಡದಲ್ಲಿ ಸಿರಿಯದ ಸೇನಾ ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿದೆ ಹಾಗೂ ಆ ಮೂಲಕ ಈ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಐಸಿಸ್ ಉಗ್ರರಿಗೆ ಸಹಾಯ ಮಾಡಿದೆ ಎಂದು ಸಿರಿಯದ ಸೇನೆಯ ಜನರಲ್ ಕಮಾಂಡ್ ಹೇಳಿದೆ.
ವಾಯು ದಾಳಿಯಲ್ಲಿ ಸಿರಿಯದ ಸೈನಿಕರು ಹತರಾಗಿದ್ದಾರೆ ಹಾಗೂ ಅಮೆರಿಕ ಮತ್ತು ಅದರ ಮಿತ್ರಪಕ್ಷಗಳು ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡುತ್ತಿವೆ ಎನ್ನುವುದಕ್ಕೆ ಇದು ‘‘ಸಂಶಯಾತೀತ ಪುರಾವೆ’’ ಎಂದು ಸಿರಿಯದ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಮೆರಿಕದ ದಾಳಿಯು ಅಪಾಯಕಾರಿಯಾಗಿತ್ತು ಹಾಗೂ ‘‘ಉಗ್ರ ಆಕ್ರಮಣಕಾರಿಯಾಗಿತ್ತು’’ ಎಂದಿದೆ.
ಅಮೆರಿಕ ನೇತೃತ್ವದ ಮಿತ್ರಪಡೆಯು 2014 ಸೆಪ್ಟಂಬರ್‌ನಿಂದ ಇಸ್ಲಾಮಿಕ್ ಸ್ಟೇಟ್ ವಿರುದ್ಧ ದಾಳಿಗಳನ್ನು ನಡೆಸುತ್ತಿದೆ.
ಶನಿವಾರ ದಾಳಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ ಅಮೆರಿಕ, ಡಯರ್ ಅಲ್ ರೊರ್ ಸಮೀಪ ಐಸಿಸ್‌ನ ಐದು ಪೂರೈಕೆ ಮಾರ್ಗಗಳ ಮೇಲೆ, ರಕ್ಕಾ ಹಾಗೂ ಸಿರಿಯದ ಇತರ ಭಾಗಗಳ ಮೇಲೆ ತಾನು ದಾಳಿ ನಡೆಸಿರುವುದಾಗಿ ಹೇಳಿದೆ.