ಮೋದಿ ಮಾದರಿಯ ಗುಜರಾತ್ ನ ಅರ್ಧಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿಲ್ಲ : ಜಿಗ್ನೇಶ್

Update: 2016-09-18 18:36 GMT

ಅಹ್ಮದಾಬಾದ್,ಸೆ.18: ಎನ್‌ಡಿಎ ಸರಕಾರವು ಕಾರ್ಮಿಕ ಹಾಗೂ ಬಡವರ ವಿರೋಧಿ ನೀತಿಯನ್ನು ಹೊಂದಿದ್ದು, ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಿ ವರ್ತಿಸುತ್ತಿದೆಯೆಂದು ಜಿಗ್ನೇಶ್ ಮೆವಾನಿ ಆಪಾದಿಸಿದ್ದಾರೆ. ಸಮಾಜವನ್ನು ಒಡೆಯುತ್ತಿರುವ ಸಂಘಪರಿವಾರದ ಹಿಂದುತ್ವ ಅಜೆಂಡಾವು ನರಕಕ್ಕೆ ಹೋಗಲಿ ಎಂದವರು ಕಟಕಿಯಾಡಿದ್ದಾರೆ.
  ದಿಲ್ಲಿಯ ಸಂಸತ್‌ಭವನ ರಸ್ತೆಯಲ್ಲಿ ಗುರುವಾರ ನಡೆದ ಬೃಹತ್ ದಲಿತ ಸ್ವಾಭಿಮಾನ ಸಂಘರ್ಷ್ ರ್ಯಾಲಿಯಲ್ಲಿ ಭಾಗವಹಿ ಮಾತನಾಡುತ್ತಿದ್ದ ಮೇವಾನಿ, ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘‘ ಕಾರ್ಪೊರೇಟ್ ಸಂಸ್ಥೆಗಳನ್ನು ಹಾಗೂ ಊಳಿಗಮಾನ್ಯ ಜಾತಿ ರಾಜಕೀಯವನ್ನು ಪ್ರೋತ್ಸಾಹಿಸುವುದೇ ಈ ಜನರ ಮನದ ಮಾತಾದರೆ (ಮನ್ ಕಿ ಬಾತ್), ಶ್ರಮಿಕರು ಹಾಗೂ ಕಾರ್ಮಿಕರ ಹಕ್ಕುಗಳ ಬಗ್ಗೆ ಧ್ವನಿಯೆತ್ತುವ ನಾವು, ಹೃದಯದಿಂದ ಮಾತನಾಡುತ್ತಿದ್ದೇವೆ’’ ಎಂದರು.
    ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರ ಗುಜರಾತ್ ಮಾದರಿಯ ಆಡಳಿತವು ಸಂಪೂರ್ಣ ಅನರ್ಥಕಾರಿಯಾಗಿತ್ತೆಂದು ಜಿಗ್ನೇಶ್ ಟೀಕಿಸಿದರು. ‘‘ಮೋದಿ ಅಧಿಕಾರಕ್ಕೆ ಬರುವ ಮೊದಲು ಗುಜರಾತ್‌ನ ಸಾಲದ ಮೊತ್ತ 25 ಸಾವಿರ ಕೋಟಿ ರೂ. ಆಗಿತ್ತು, ಆದರೆ ಈಗ ಅದು 1.80 ಲಕ್ಷ ಕೋಟಿ ರೂ. ದಾಟಿದೆ. ನರ್ಮದಾ ನದಿ ಅಣೆಕಟ್ಟು ಯೋಜನೆಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದ್ದರೂ, ಈಗಲೂ ಗುಜರಾತ್ ಅರ್ಧ ಭಾಗ ನೀರಿನ ದಾಹದಿಂದ ಬಳಲುತ್ತಿದೆ’’ ಎಂದರು.
  ದಲಿತರಿಗೆ ಜಮೀನಿನಲ್ಲಿ ಅವರ ನ್ಯಾಯಬದ್ಧ ಪಾಲನ್ನು ನೀಡಬೇಕೆಂದು ಆಗ್ರಹಿಸಿದ ಜಿಗ್ನೇಶ್, ಒಂದು ವೇಳೆ ಗುಜರಾತ್ ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗದಿದ್ದರೆ ಅಕ್ಟೋಬರ್ 1ರಿಂದ ರೈಲ್ ರೋಖೋ ನಡೆಸುವುದಾಗಿ ಘೋಷಿಸಿದರು. ಸಮಾಜವನ್ನು ಜಾತಿಯ ಆಧಾರದಲ್ಲಿ ವಿಭಜಿಸುವ ಸಂಘಪರಿವಾರ, ಗೋರಕ್ಷಕಕರು ಹಾಗೂ ನರೇಂದ್ರ ಮೋದಿಯನ್ನು ಬಲವಾಗಿ ವಿರೋಧಿಸುವ ವಾತಾವರಣವನ್ನು ಸೃಷ್ಟಿಸುವಂತೆ ಅವರು ಬೆಂಬಲಿಗರಿಗೆ ಕರೆ ನೀಡಿದರು.ಸೀತಾರಾಮ್ ಯಚೂರಿ, ರಾಧಿಕಾ ವೇಮುಲಾ ಹಾಗೂ ಬೇಜವಾಡ ವಿಲ್ಸನ್ ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
         ರ್ಯಾಲಿಯಲ್ಲಿ ಭಾಗವಹಿಸಿದ ಬಳಿಕ ಗುಜರಾತ್‌ಗೆ ಹಿಂತಿರುಗಿದ್ದ ಮೇವಾನಿಯನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ತನ್ನ ಜನ್ಮದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗರೂಕತಾ ಕ್ರಮವಾಗಿ ಮೇವಾನಿಯನ್ನು ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಪಾಟದಾರ್ ಮೀಸಲಾತಿ ಆಂದೋಲನದ ಸಮಿತಿಯ ನಾಯಕ ರೇಶ್ಮಾ ಪಟೇಲ್ ಹಾಗೂ 400 ದಲಿತ ಹಾಗೂ ಪಾಟಿದಾರ್ ಚಳವಳಿಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News