×
Ad

ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡಮಿ ಅಗತ್ಯ: ಅಂಬಾತನಯ ಮುದ್ರಾಡಿ

Update: 2016-09-18 23:46 IST

ಉಡುಪಿ, ಸೆ. 18: ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡಮಿಯ ಆವಶ್ಯಕತೆ ಕುರಿತು ಸರಕಾರಕ್ಕೆ ವರದಿ ಸಲ್ಲಿಕೆಯಾಗಿ ಎರಡೂ ವರ್ಷ ಕಳೆದರೂ ಇನ್ನೂ ಈಡೇರಿಲ್ಲ. ಹೀಗಾಗಿ ಯಕ್ಷಗಾನ ಕಲೆಗೆ ಅನ್ಯಾಯವಾಗುತ್ತಿದೆ. ಅಕಾಡಮಿ ಸ್ಥಾಪನೆ ಕುರಿತು ಸಾರ್ವಜನಿಕರ ಬೆಂಬಲ ಸಿಗಬೇಕಾಗಿದೆ ಎಂದು ಯಕ್ಷಗಾನ ಬಯಲಾಟ ಅಕಾಡಮಿ ಸದಸ್ಯ ಹಾಗೂ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.
ಉಡುಪಿಯ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್ ರಂಗಸ್ಥಳ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಹಾಗೂ ಪರ್ಕಳ ಲಯನ್ಸ್ ಕ್ಲಬ್ ಸಹಯೋಗದಲ್ಲಿ ರವಿವಾರ ಪುರಭವನದಲ್ಲಿ ಹಮ್ಮಿಕೊಳ್ಳಲಾದ ‘ಯಕ್ಷಗಾನ ರಸಾಭಿವ್ಯಕ್ತಿ’ ಚಿಂತನ-ಮಾರ್ಗದರ್ಶನ-ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕರಾವಳಿ ಜಿಲ್ಲೆ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಚಿರಪರಿಚಿತ ವಾಗಿರುವ ಯಕ್ಷಗಾನ ಕಲೆಯು ಉಳಿದೆಲ್ಲ ಜಿಲ್ಲೆಗಳಲ್ಲಿ ಅಪರಿಚಿತವಾಗಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಿಗೆ ಯಕ್ಷಗಾನ ಕಲೆಯನ್ನು ಪಸರಿಸುವ ಕಾರ್ಯ ಅಕಾಡಮಿಯಿಂದ ನಡೆಯಬೇಕಾಗಿದೆ. ಕಾಲಕ್ಕೆ ಸರಿಯಾದ ಚಿಂತನೆ ಗಳೊಂದಿಗೆ ಯಕ್ಷಗಾನದಲ್ಲಿಯೂ ಕಾಯಕಲ್ಪ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮಾತನಾಡಿ, ಸಂಗೀತ, ನೃತ್ಯ, ನಟನೆ ಸೇರಿದಂತೆ ಎಲ್ಲ ರೀತಿಯ ಕಲೆಗಳನ್ನು ಹೊಂದಿರುವ ಯಕ್ಷಗಾನವು ಒಂದು ಪರಿಪೂರ್ಣ ಕಲೆಯಾಗಿದೆ. ಎಲ್ಲ ಕಲೆಗಳನ್ನು ಮೀರಿದ ಶಕ್ತಿಯ ಈ ಕಲಾಪ್ರಕಾರಕ್ಕೆ ಇದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ವಹಿಸಿದ್ದರು. ಉಜ್ವಲ್ ಡೆವಲಪರ್ಸ್‌ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ. ಶೆಟ್ಟಿ, ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಮೆಂಡನ್, ರಂಗಸ್ಥಳದ ಮಹಾಬಲ ಕುಂದರ್, ಸೂರ್ಯಪ್ರಕಾಶ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಬಯಲಾಟ ಅಕಾಡಮಿ ಸದಸ್ಯ ಕಿಶನ್ ಹೆಗ್ಡೆ ಕೊಳ್ಕೆಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಸ್ಥಳದ ಮ್ಯಾನೇಜಿಂಗ್ ಟ್ರಸ್ಟಿ ಯು. ಆರ್.ಸಭಾಪತಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News