ನನ್ನ ಎರಡನೆ ತಾಯಿ ಮದರ್ ತೆರೆಸಾ: ಗೌತಮ್ ಲೂಯಿಸ್

Update: 2016-09-19 08:08 GMT

ಮಂಗಳೂರು, ಸೆ.19: ‘‘ನನಗೆ ಜನ್ಮ ನೀಡಿದ ತಾಯಿ ಯಾರೆಂದು ನನಗೆ ತಿಳಿದಿಲ್ಲ. ಆದರೆ ನನಗೆ ಹೊಸ ಜೀವನಕ್ಕೆ ಅವಕಾಶ ಕಲ್ಪಿಸಿದ ಕೊಲ್ಕತ್ತಾದ ಮಿಶಿನರೀಸ್ ಆಫ್ ಚಾರಿಟಿಯ ಮಹಾಮಾತೆ, ಮದರ್ ತೆರೆಸಾ ನನ್ನ ಎರಡನೆ ತಾಯಿ. ಹಾಗೆಯೇ ನನ್ನನ್ನು ದತ್ತುಪಡೆದು ನನ್ನ ಕನಸನ್ನು ಸಾಕಾರಗೊಳಿಸಲು ಸಹಕರಿಸಿದ ಲಂಡನ್‌ನ ಪರಮಾಣು ಭೌತಶಾಸ್ತ್ರಜ್ಞೆ ಡಾ. ಪಟ್ರಿಶಿಯಾ ಲೂಯಿಸ್ ನನ್ನ ಮೂರನೆ ಜನ್ಮದಾತೆ’’. ಹೀಗೆಂದು ಹೇಳಿಕೊಂಡವರು ಭಾರತೀಯ ಮೂಲದ ಲಂಡನ್ ನಿವಾಸಿ ಗೌತಮ್ ಲೂಯಿಸ್.

ಮದರ್ ತೆರೆಸಾರಿಗೆ ಸಂತ ಪದವಿ ನೀಡಲಾದ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿದ ಕಡೆಗಳಲ್ಲಿ ಆಯೋಜಿಸಲಾಗಿರುವ ‘ಮದರ್ ತೆರೆಸಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ನಗರದ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯಲ್ಲಿ ಇಂದು ಚಾಲನೆ ನೀಡಿ ಅವರು ಮಾತನಾಡಿದರು.

ನನ್ನ ಜೀವನಕ್ಕೊಂದು ಹೊಸ ದಾರಿ ನೀಡಿದ ಮದರ್ ತೆರೆಸಾ ಅವರನ್ನು, 7ರ ಹರೆಯದಲ್ಲೇ ಕೊಲ್ಕತ್ತಾದಿಂದ ಲಂಡನ್‌ಗೆ ತೆರಳಿದ್ದ ನಾನು ಮತ್ತೆ ಭೇಟಿಯಾಗಿದ್ದು, 1996ರಲ್ಲಿ. ಇದೀಗ ಸಂತ ಪದವಿ ಪಡೆದ ಮದರ್ ತೆರೆಸಾ ಕುರಿತು, ಭಾರತದಲ್ಲಿ ಹುಟ್ಟಿ ಬೆಳೆದ ನನಗೂ ಒಂದಿಷ್ಟು ಜವಾಬ್ದಾರಿ ಇದೆ ಎಂಬ ನೆಲೆಯಲ್ಲಿ ಮದರ್ ತೆರೆಸಾರ ಸೇವೆಯ ಕುರಿತಾದ ಸಾಕ್ಷಚಿತ್ರವನ್ನು ನಿರ್ಮಾಣ ಮಾಡಿದ್ದೇನೆ ಎಂದರು.

ಅದಕ್ಕಾಗಿ 2016ರ ಆಗಸ್ಟ್ 12ರಂದು ಕೊಲ್ಕತ್ತಾಗೆ ಆಗಮಿಸಿ, ಚಿತ್ರ ನಿರ್ದೇಶಿಸಿ ಇದೀಗ ದೇಶ, ವಿದೇಶಗಳಲ್ಲಿ ಅವುಗಳನ್ನು ಪ್ರದರ್ಶಿಸುವ ಕಾರ್ಯ ವಿವಿಧ ಸಂಘ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ಭಾರತದ ವಿವಿಧ ಕಡೆಗಳಲ್ಲಿ ಈಗಾಗಲೇ ಪ್ರದರ್ಶನ ನಡೆಸಲಾಗಿದ್ದು, ಮದರ್ ತೆರೆಸಾರವರು ಭೇಟಿ ನೀಡಿರುವ ಮಂಗಳೂರಿನಲ್ಲೂ ಈ ಚಿತ್ರ ಪ್ರದರ್ಶನಕ್ಕೆ ವಿಶೇಷ ಶಾಲೆಯಲ್ಲಿ ಅವಕಾಶ ನೀಡಿರುವುದು ನನಗೆ ತುಂಬಾ ಸಂತಸ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಮದರ್ ತೆರೆಸಾ ಅವರ ಭಾವಚಿತ್ರಕ್ಕೆ ವಿಶೇಷ ಮಕ್ಕಳ ಜತೆ ಹೂ ಅರ್ಪಿಸಿ ತಮ್ಮ ಜೀವನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡ ಅವರು ಮಕ್ಕಳ ಜತೆಯಲ್ಲೇ ನೆಲದಲ್ಲಿ ಕುಳಿತು ಕೆಲ ಹೊತ್ತು ಸಾಕ್ಷ ಚಿತ್ರ ವೀಕ್ಷಿಸುವ ಮೂಲಕ ಸರಳತೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಮಕ್ಕಳು ಪ್ರಾರ್ಥಿಸಿದರು.

ಫಳ್ನೀರ್‌ನ ಮದರ್ ತೆರೆಸಾ ಮಿಶನರೀಸ್ ಆಫ್ ಚಾರಿಟೀಸ್‌ನ ಸಿಸ್ಟರ್ ಬರ್ನಡಿಕ್ಟ್, ಸಂದೇಶದ ನಿರ್ದೇಶಕ ಫಾ. ವಿಜಯಾ ವಿಕ್ಟರ್ ಲೋಬೋ, ಕೆನರಾ ಸಂಪರ್ಕ ಕೇಂದ್ರದ ನಿರ್ದೇಶಕ ಾ. ರಿಚರ್ಡ್ ಡಿಸೋಜ ಉಪಸ್ಥಿತರಿದ್ದರು. ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಶ್ರುತಿ ಸ್ವಾಗತಿಸಿದರು. ಸಿಸ್ಟರ್ ಮಾರ್ಸೆಲಿನ್ ಕಾರ್ಯಕ್ರಮ ನಿರೂಪಿಸಿದರು.

ಸೆ.20ರಂದು ಸೈಂಟ್ ಜೋಸ್ ಸೆಮಿನಾರ್ ಹಾಲ್‌ನಲ್ಲಿ ಹಾಗೂ 21ರಂದು ನಂತೂರು ಪದುವಾ ಕಾಲೇಜು ಹಾಲ್‌ನಲ್ಲಿ ಈ ಮದರ್ ತೆರೆಸಾ ಕುರಿತಾದ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News